Home News ಡಿ.ಸಿ.ಸಿ. ಬ್ಯಾಂಕಿನಿಂದ ನಗದು ರೂಪದಲ್ಲಿ ಸಾಲ ವಿತರಣೆ

ಡಿ.ಸಿ.ಸಿ. ಬ್ಯಾಂಕಿನಿಂದ ನಗದು ರೂಪದಲ್ಲಿ ಸಾಲ ವಿತರಣೆ

0

ಬ್ಯಾಂಕುಗಳಿಂದ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವುದರಲ್ಲಿ ಮಹಿಳೆಯರು ಶೇ. ೯೮ ರಷ್ಟು ಯಶಸ್ವಿಯಾಗಿದ್ದಾರೆ. ಡಿ.ಸಿ.ಸಿ.ಬ್ಯಾಂಕಿನಿಂದ ನೀಡುತ್ತಿರುವ ಸಾಲವು ದುರ್ಬಳಕೆಯಾಗುವುದನ್ನು ತಪ್ಪಿಸಲು ನಗದು ರೂಪದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಕೆ.ವಿ.ಭವನದಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಸ್ವಸಹಾಯ ಗುಂಪುಗಳಿಗೆ ೨ ಕೋಟಿ ೩ ಲಕ್ಷ ೮೧ ಸಾವಿರ ರೂಪಾಯಿಗಳ ಸಾಲ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಅವರ ಮನೆ ಬಾಗಿಲಿಗೆ ಬಂದು ಸಾಲ ಸೌಲಭ್ಯ ವಿತರಿಸುವ ವಿಶೇಷ ಯೋಜನೆಯನ್ನು ರಾಜ್ಯದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅನುಷ್ಠಾನಗೊಳಿಸಿದ್ದು, ಮಹಿಳೆಯರು ತಾವು ಪಡೆದುಕೊಂಡಂತಹ ಸಾಲಗಳನ್ನು ಸದ್ಭಳಕೆ ಮಾಡಿಕೊಂಡು, ಆರ್ಥಿಕವಾಗಿ ಸಬಲರಾಗಬೇಕು.
ಮಹಿಳೆಯರ ಅಭಿವೃದ್ಧಿಗಾಗಿ ಶೇ. ೩೩ ಪೈಸೆ ಬಡ್ಡಿಧರದಲ್ಲಿ ೫ ಲಕ್ಷದವರೆಗೂ ಸಾಲಗಳನ್ನು ನೀಡಲಾಗುತ್ತಿದೆ, ರೈತರಿಗೆ ೩ ಲಕ್ಷ ರೂಪಾಯಿಗಳವರೆಗೂ ಬಡ್ಡಿರಹಿತ ಸಾಲವನ್ನೂ ಬ್ಯಾಂಕಿನ ಮುಖಾಂತರ ವಿತರಣೆ ಮಾಡಲಾಗುತ್ತಿದ್ದು, ರೈತರೂ ಕೂಡಾ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಈ ಭಾಗದ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಕೆ.ಸಿ.ವ್ಯಾಲಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ನರಸಾಪುರ ಕೆರೆಯಲ್ಲಿ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಿ, ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ. ಕೋಲಾರ ಭಾಗದ ಕೆರೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ, ಹೆಬ್ಬಾಳ-ನಾಗವಾರ ಕೆರೆಯಲ್ಲಿನ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರ ಕೆರೆ, ಹೊಸಹುಡ್ಯ ಕೆರೆ, ಕೇಶವಾರ ಕೆರೆ, ಅಮ್ಮನಕೆರೆ ನಂತರ ಬದ್ದನಕೆರೆಯನ್ನು ತುಂಬಿಸಲಾಗುತ್ತದೆ. ಇದರಿಂದ ಈ ಭಾಗದಲ್ಲಿನ ರೈತರಿಗೂ ಅನುಕೂಲವಾಗಲಿದ್ದು, ಯೋಜನೆಯ ಅನುಷ್ಠಾನಕ್ಕೆ ಎಲ್ಲಾ ಪಕ್ಷಗಳ ಶಾಸಕರುಗಳ ಸಹಕಾರವಿದೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಡಿ.ಸಿ.ಸಿ ಬ್ಯಾಂಕ್ ತಮ್ಮ ಮನೆ ಬಾಗಿಲಿಗೆ ಬಂದು ಸಾಲ ಸೌಲಭ್ಯ ನೀಡುತ್ತಿದ್ದು ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತೀರೋ ಅದಕ್ಕಾಗಿಯೇ ಹಣ ಬಳಸಿ ಸಕಾಲದಲ್ಲಿ ಸಾಲ ಮರು ಪಾವತಿಸುವುದರಿಂದ ಬ್ಯಾಂಕುಗಳು ಅಭಿವೃದ್ಧಿಯಾಗುತ್ತದೆ ಹಾಗು ಮತ್ತೊಬ್ಬರಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಎಲ್ಲರೂ ಸಕಾಲದಲ್ಲಿ ಸಾಲ ಮರು ಪಾವತಿಸಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತುಕೊಟ್ಟಿದ್ದು, ದಿವಾಳಿಯ ಅಂಚಿನಲ್ಲಿದ್ದ ಡಿ.ಸಿ.ಸಿ. ಬ್ಯಾಂಕುಗಳಿಗೆ ಹೆಚ್ಚಿನ ನೆರವು ನೀಡುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿನ ಮಹಿಳೆಯರ ಆರ್ಥಿಕ ಸಬಲತೆಗೆ ನಾಂದಿ ಹಾಡಿದೆ. ಆದ್ದರಿಂದ ಮಹಿಳೆಯರು, ಸಾಮಾಜಿಕವಾಗಿ, ಆರ್ಥಿಕವಾಗಿ, ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಕಡೆಗೆ ಗಮನ ನೀಡಬೇಕು, ಮಕ್ಕಳನ್ನು ಶೈಕ್ಷಣಿಕವಾಗಿ ಬೆಳವಣಿಗೆ ಮಾಡುವ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು, ಎಂದರು.
ಡಿ.ಸಿ.ಸಿ.ಬ್ಯಾಂಕಿನ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಮಾತನಾಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್, ಚಿಂತಾಮಣಿ ತಾಲ್ಲೂಕಿನ ವೆಂಕಟರಮಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮಳ್ಳೂರು ಎಸ್.ಎಫ್.ಸಿ.ಎಸ್ ನ ಅಧ್ಯಕ್ಷ ವೆಂಕಟರೆಡ್ಡಿ, ಉಪಾಧ್ಯಕ್ಷ ನಾರಾಯಣಸ್ವಾಮಿ, ಭಕ್ತರಹಳ್ಳಿ ಮುನೇಗೌಡ, ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಎನ್.ಆನಂದ್, ಮೇಲ್ವಿಚಾರಕ ಲಿಂಗರಾಜು, ಉಷಾರಾಣಿ, ಎಸ್.ನಾಗರಾಜ್, ಮಂಜುನಾಥ.ಎಂ.ಎಸ್, ಕೆ.ದೇವಿಕ, ಅಕ್ಕಲಪ್ಪ, ಭೀಮಪ್ಪ, ಸದಾಶಿವರೆಡ್ಡಿ ಮುಂತಾದವರು ಹಾಜರಿದ್ದರು.