Home News ತಲಕಾಯಲಬೆಟ್ಟದಲ್ಲಿ ಕಂಡುಬಂದ ಚಿರತೆ

ತಲಕಾಯಲಬೆಟ್ಟದಲ್ಲಿ ಕಂಡುಬಂದ ಚಿರತೆ

0

ತಲಕಾಯಲಬೆಟ್ಟ ಮೀಸಲು ಅರಣ್ಯದ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಬೆಟ್ಟದ ಬಂಡೆಯ ಮೇಲೆ ಕಂಡ ಚಿರತೆಯ ಛಾಯಾಚಿತ್ರವನ್ನು ರಾಜು ಎಂಬ ಛಾಯಾಗ್ರಾಹಕ ತೆಗೆದಿದ್ದು, ಅದು ಮುಸುಕಾಗಿದ್ದರೂ, ಚಿರತೆಯು ಅಲ್ಲಿ ಕಂಡು ಬಂದುದಕ್ಕೆ ಸಾಕ್ಷಿಯಾಗಿದೆ.
ತಾಲ್ಲೂಕಿನ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿ ದೇವಾಲಯದ ಬಳಿಯ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯವರು ಅದನ್ನು ಹಿಡಿಯಲು ಬೋನನ್ನು ಇರಿಸಿದ್ದಾರೆ.
ಚಿರತೆ ಕಾಣಿಸಿಕೊಂಡ ಮಾಹಿತಿ ಸಿಕ್ಕೊಡನೆಯೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ಮತ್ತು ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಚಿರತೆ ಹಿಡಿಯುವ ಬೋನನ್ನು ಇರಿಸಿದ್ದಾರೆ. ನಾಯಿಯನ್ನು ಬೋನಿನಲ್ಲಿ ಇರಿಸಿದ್ದು, ಅದನ್ನು ತಿನ್ನಲು ಬಂದಾಗ ಚಿರತೆಯು ಬೋನಿನೊಳಗೆ ಬೀಳುವ ವ್ಯವಸ್ಥೆಯನ್ನು ಮಾಡಿದ್ದಾರೆ. ಉಪವಲಯ ಅರಣ್ಯಾಧಿಕಾರಿ ರಾಮಾಂಜನೇಯುಲು, ಅರಣ್ಯ ರಕ್ಷಕ ಶ್ರೀರಾಮಪ್ಪ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ. ಅರಣ್ಯ ಸಿಬ್ಬಂದಿಯ ಎರಡು ತಂಡಗಳನ್ನು ರಚನೆ ಮಾಡಿದ್ದು ಹಗಲೂ ರಾತ್ರಿ ಪಾಳಿಯಲ್ಲಿ ಚಿರತೆಯ ಓಡಾಟದ ಮೇಲೆ ಕಣ್ಣಿಟ್ಟಿದ್ದಾರೆ.
ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಪೂಜೆಗೆಂದು ಬರುವ ಭಕ್ತರು ಬೆಟ್ಟವನ್ನೇರುವುದು ರೂಢಿಯಾಗಿತ್ತು. ಆದರೆ ಚಿರತೆ ಕಂಡು ಬಂದ ಹಿನ್ನೆಲೆಯಲ್ಲಿ ಜನರು ಒಬ್ಬೊಬ್ಬರೇ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಈ ಪ್ರದೇಶದಲ್ಲಿ ತಿರುಗಾಡಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.