Home News ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ

ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ

0

ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಮಂಗಳವಾರ ಮಾಘ ಮಾಸದ ಹುಣ್ಣಿಮೆಯ ದಿನ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ವಿಜೃಂಬಣೆಯಿಂದ ನಡೆಯಿತು. ಜಿಲ್ಲಾಧಿಕಾರಿ ಡಾ.ವೆಂಕಟೇಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮತ್ತು ಶಾಸಕ ಎಂ.ರಾಜಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು.
ಸುತ್ತಮುತ್ತಲಿನ ತಾಲ್ಲೂಕುಗಳಿಂದ ಸಾವಿರಾರು ಜನರು ಆಗಮಿಸಿ ದೇವರ ದರ್ಶನ ಪಡೆದರು. ಡೊಳ್ಳುಕುಣಿತ, ವೀರಗಾಸೆ, ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ತಮಟೆ ವಾದನ ಮತ್ತು ವಿವಿಧ ಅಂಗಡಿಗಳ ಸಾಲು ಎಲ್ಲರ ಆಕರ್ಷಣೆಯಾಗಿತ್ತು. ವಿಶೇಷ ಹೂವಿನ ಅಲಂಕಾರ ಮಾಡಿದ್ದ ಬ್ರಹ್ಮರಥೋತ್ಸವದ ತೇರನ್ನು ದೇವಸ್ಥಾನದ ಸುತ್ತಲೂ ಎಳೆದ ಭಕ್ತರು ಬಾಳೆಹಣ್ಣು, ದವನವನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತನನ್ನು ಕೋರಿಕೊಂಡರು.
ಜಾನುವಾರುಗಳ ಜಾತ್ರೆಗೆ ನೆರೆ ರಾಜ್ಯಗಳಿಂದ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ರಾಸುಗಳ ವ್ಯಾಪಾರ ವಹಿವಾಟು ನಡೆದಿತ್ತು. ಪಂಚಾಯತಿ ವತಿಯಿಂದ ರಾಸುಗಳಿಗೆ ನೆರಳು, ಮೇವು ಮತ್ತು ನೀರನ್ನು ಒದಗಿಸಲಾಗಿತ್ತು. ದೇವಾಲಯದ ಸಮಿತಿ ವತಿಯಿಂದ ಭಕ್ತರಿಗೆಲ್ಲ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಕೆಲ ಗ್ರಾಮಗಳಿಂದ ಭಕ್ತರು ಟ್ರಾಕ್ಟರಿನಲ್ಲಿ ತಿಂಡಿ ತಯಾರಿಸಿ ತಂದು ವಿತರಿಸಿದರು.
ಶ್ರೀಮಸ್ತಕಾಚಲ, ತಲಕಾಯಲಬೆಟ್ಟ, ತಲೆಕಾಯ್ದಬೆಟ್ಟ, ತಲಕಾಚಿನಕೊಂಡ ಇತ್ಯಾದಿ ಹೆಸರಿರುವ ಈ ಸ್ಥಳ ವೆಂಕಟರಮಣನ ದೇವಾಲಯದಿಂದ ಪ್ರಸಿದ್ಧಿ ಪಡೆದಿದೆ.
ಹಿಂದೆ ಈ ಪ್ರದೇಶಕ್ಕೆ ವೆಂಕಟೇಶಸಾಗರವೆಂದು ಕರೆಯುತ್ತಿದ್ದರು. ಶಿಡ್ಲಘಟ್ಟ ಪಾಳೆಯಪಟ್ಟನ್ನು ನೋಡಿಕೊಳ್ಳುತ್ತ್ದಿದ ತಿಮ್ಮರಾಜು ಇಲ್ಲಿನ ಪೊದೆಗಳಲ್ಲಿ ಹುದುಗಿದ್ದ ವೆಂಕಟೇಶನ ದೇವಾಲಯವನ್ನು ತನ್ನ ಸೇನೆಯ ಸಹಾಯದಿಂದ ಶೋಧಿಸಿ ಬೆಳಕಿಗೆ ತಂದು ಪ್ರತಿಷ್ಠಾಪಿಸಿದನೆಂದು ಸ್ಥಳೀಯವಾಗಿ ಹೇಳಲಾಗುತ್ತದೆ. ಸಮೀಪವೇ ಪಾಪಾಗ್ನಿ ನದಿಯಿದೆ.
ಬೆಟ್ಟದ ಕೆಳಗೆ ವಿಜಯನಗರೋತ್ತರ ಕಾಲದ ವೆಂಕಟೇಶನ ದೇವಾಲಯವನ್ನು ವಿಶಾಲವಾದ ನಿವೇಶನದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಪ್ರಾಚೀನ ಕಲ್ಯಾಣಿಯಿದೆ. ದೇವಾಲಯದ ಪ್ರಾಕಾರವನ್ನು ಪ್ರವೇಶಿಸಲು ಎರಡು ಪ್ರವೇಶದ್ವಾರಗಳಿವೆ. ಮುಖ್ಯ ದ್ವಾರದ ಎಡಬದಿಯ ಗೋಡೆಯಲ್ಲಿ ವರಾಹ, ಮತ್ಸ್ಯ, ಕೂರ್ಮ, ಚಂದ್ರ ಹಾಗೂ ಸೂರ್ಯರ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ.
ಮಹರ್ಷಿ ವಾಲ್ಮೀಕಿಯು ತನ್ನ ಪೂರ್ವಾಶ್ರಮದಲ್ಲಿ ವಾಸಿಸುತ್ತಿದ್ದ ಸ್ಥಳಪುರಾಣವಿದ್ದು, ಅದಕ್ಕೆ ತಳುಕು ಹಾಕಿಕೊಂಡಂತೆ ದೇವಾಲಯದ ಮುಂದೆ ತೆಂಗಿನಕಾಯಿಗಳನ್ನು ಬೆಂಕಿಗೆ ಆಹುತಿ ನೀಡುವ ಸಂಪ್ರದಾಯವಿದೆ. ಆ ಹೊಗೆಯು ದೇವಾಲಯದ ಎತ್ತರಕ್ಕೂ ಆವರಿಸಿತ್ತು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಶಾಸಕ ಎಂ.ರಾಜಣ್ಣ, ಮಾಜಿ ಶಾಸಕ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಶಿವಣ್ಣ, ರಾಮಚಂದ್ರ, ನಾರಾಯಣಸ್ವಾಮಿ, ಪ್ರಧಾನ ಅರ್ಚಕ ರಾಮಾನುಜಾ ಭಟ್ಟಾಚಾರ್ಯ, ಅಶ್ವತ್ಥನಾರಾಯಣರೆಡ್ಡಿ, ಕೇಶವಭಟ್ಟಾಚಾರ್ಯ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.