Home News ತಲೆಗೆ ಕಾಯಿ ಒಡೆಸಿಕೊಳ್ಳುವ ವಿಭಿನ್ನ ಕಲೆ

ತಲೆಗೆ ಕಾಯಿ ಒಡೆಸಿಕೊಳ್ಳುವ ವಿಭಿನ್ನ ಕಲೆ

0

ಜಾನಪದ ಆಚರಣೆಗಳು ವೈವಿದ್ಯಮಯ. ಅವುಗಳಲ್ಲಿ ಕೆಲವು ನೋಡಲು ಮೈನವಿರೇಳಿಸುವಂತೆ ಭೀಭತ್ಸವಾಗಿರುತ್ತವೆ. ಇಂಥಹ ವಿಶಿಷ್ಟವಾದ ಜನಪದ ಆಚರಣೆ ‘ತೆಂಗಿನಕಾಯಿ ಪವಾಡ’. ಕುರುಬ ಜನಾಂಗದವರು ನಡೆಸುವ ಈ ಜಾನಪದ ಕಲೆಯು ದೈವಾರಾಧಕ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಚಿಕ್ಕವರಿಂದ ಹಿಡಿದು ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವ ದೃಶ್ಯ ಎಂಥವರಿಗಾದರೂ ಮೈನವಿರೇಳಿಸುವಂಥದ್ದು.
ನಗರದಲ್ಲಿ ಗುರುವಾರ ಕನಕ ಜಯಂತಿಯ ಪ್ರಯುಕ್ತ ಕನಕ ಭಜನೆ ಮಂದಿರದಲ್ಲಿ ವಿಶೇಷ ಪೂಜೆಯನ್ನು ನಡೆಸಿದ ನಂತರ ತೆಂಗಿನ ಕಾಯಿ ಪವಾಡವನ್ನು ನಡೆಸಲಾಯಿತು. ಗುರುವು ಭಕ್ತನ ತಲೆಯ ಮೇಲೆ ತೆಂಗಿನ ಕಾಯಿಯನ್ನು ಒಡೆಯುತ್ತಾ ಹೋಗುವ ರೋಮಾಂಚಕ ದೃಶ್ಯವನ್ನು ಸಾರ್ವಜನಿಕರು ಅಚ್ಚರಿಯಿಂದ ವೀಕ್ಷಿಸಿದರು.
ಸಮಾಜದಲ್ಲಿ ಹಾಲಿನಲ್ಲಿ ನೀರು ಬೆರೆಯುವಂತೆ ಬಾಳ್ವೆ ನಡೆಸುವರೆಂದು ಕುರುಬ ಜನಾಂಗದವರನ್ನು ಹಾಲು ಮತಸ್ಥರೆಂದು ಕರೆಯುತ್ತಾರೆ. ಅವರ ಕುಲದೈವ ಬೀರೇದೇವರು. ಈಶ್ವರ ಬೀರೇಶ್ವರನಾಗಿ ಭೂಲೋಕಕ್ಕೆ ಬಂದನೆಂದು ಇವರು ನಂಬುತ್ತಾರೆ. ಅವರು ತಮ್ಮ ಕುಲದೇವರನ್ನು ಪೂಜಿಸುವ ಆಚರಣೆಯನ್ನು ಕುರುಬರ ದ್ಯಾವರ ಎನ್ನುತ್ತಾರೆ. ತಮ್ಮ ಮೂಲ ದೇವಸ್ಥಾನದ ಬಳಿ ಸೇರಿ ಆಚರಿಸುವ ಹಬ್ಬವಿದು. ಭೀರೇಶ್ವರ, ಭತ್ಯೇಶ್ವರ, ಸಿದ್ದೇಶ್ವರ, ಅಬ್ಬಿಣಿ ಬೀರೇಶ್ವರ, ಇಟ್ಟೇಶ್ವರ, ಕಾಶಿ ಬೀರೇಶ್ವರ, ಅಜ್ಜ ಬೀರೇಶ್ವರ, ಗುರು ಮೂರ್ತೇಶ್ವರ, ಮೈಲಾರ ಲಿಂಗೇಶ್ವರ ಹೀಗೆ ವಿವಿಧ ಹೆಸರಿನ ಮನೆದೇವರನ್ನು ಅವರಲ್ಲಿ ಹಲವರು ಹೊಂದಿದ್ದಾರೆ.
ದ್ಯಾವರದಲ್ಲಿ ತಮಟೆ ಎತ್ತನ್ನು ಕಳಸ ಹಾಗೂ ಭಂಡಾರದ ಪೆಟ್ಟಿಗೆಯೊಂದಿಗೆ ತೆಗೆದುಕೊಂಡು ಹೋಗಿ ಗುರು ಅಥವಾ ಜಂಗಮರಿಂದ ಪೂಜೆ ಮಾಡಲಾಗುತ್ತದೆ. ಗುರುವು, ತಮಟೆ ಎತ್ತಿನ ಪಾದ ಮತ್ತು ಹಣೆ ತೊಳೆದು ಪೂಜಿಸಿ ಬೀರಪ್ಪನನ್ನು ಹೊಗಳುತ್ತಾ ವೀರಮಕ್ಕಳು, ವೀರಗಾರ್ರು ಅಥವಾ ಈರಗಾರ್ರ ತಲೆ ಮೇಲೆ ತೆಂಗಿನಕಾಯಿಯನ್ನು ಹೊಡೆಯುತ್ತಾರೆ.
ಈರಗಾರ್ರು ಆವೇಶ ಬಂದಂತೆ ‘ಭಲರೇ, ಭಾಲ್ವರೇ ವೀರ, ವೀರಾಧಿವೀರ, ವಿಸ್ಮಯಕಾರ, ದಶಾವತಾರ, ಭಗಿನಿಕುಮಾರ, ರಾರಾ ನಾ ಮುದ್ದುಲ ವೀರಭದ್ರ, ಭಲರೇ ಬಾಲ್ವರೇ ವೀರ’ ಎಂಬ ಘೋಷಣೆ ಕೂಗುತ್ತಿರುತ್ತಾರೆ. ಹುಡುಗರಿಂದ ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಹೊಡೆಸಿಕೊಳ್ಳಲು ಕೊರಳಿಗೆ ಹೂಮಾಲೆ ಹಾಕಿಕೊಂಡು ಗುರುಗಳಿಂದ ಆಶೀರ್ವಾದ ಪಡೆದುಕೊಂಡು ದಂಡಕಗಳನ್ನು ಹೇಳಿಸಿಕೊಂಡು ಸಿದ್ಧರಾಗಿರುತ್ತಾರೆ. ಹೀಗೆ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವುದನ್ನು ತೆಂಗಿನಕಾಯಿ ಪವಾಡ ಎನ್ನುತ್ತಾರೆ. ಈ ಕಾಯಿ ಪವಾಡ ನೋಡಲು ಸಾವಿರಾರು ಮಂದಿ ಭಕ್ತಾದಿಗಳು ಕುತೂಹಲಿಗಳಾಗಿ ಸೇರಿರುತ್ತಾರೆ.
‘ಈ ಪವಾಡದಲ್ಲಿ ಭಾಗವಹಿಸುವ ವೀರಮಕ್ಕಳು ಉಪವಾಸ ವ್ರತವನ್ನು ಕೈಗೊಂಡಿರುತ್ತಾರೆ. ಹೀಗೆ ಕಟ್ಟುನಿಟ್ಟಾಗಿ ಬಹಳ ಭಯ ಭಕ್ತಿಯಿಂದ ಇದ್ದಾಗ ಮಾತ್ರ ತಲೆ ಮೇಲೆ ಎಷ್ಟು ಕಾಯಿ ಒಡೆದರೂ ತಲೆಗೆ ಗಾಯವಾಗುವುದಿಲ್ಲ. ಒಂದು ವೇಳೆ ಕಾಯಿ ಕರಟ ತಗುಲಿ ರಕ್ತ ಬಂದಿದ್ದರೂ ಭಂಡಾರ ಹಚ್ಚುವುದರಿಂದ ದೇವರ ಶಕ್ತಿಯಿಂದ ಗಾಯ ವಾಸಿಯಾಗುತ್ತದೆ. ಅದಕ್ಕಾಗಿ ಯಾವುದೇ ರೀತಿಯ ಔಷಧಿ ಪಡೆಯಬೇಕಾದ ಅಗತ್ಯವಿಲ್ಲ. ಕೆಲವರು ನಿರಂತರವಾಗಿ ಕಾಯಿಗಳನ್ನು ಒಡೆಸಿಕೊಳ್ಳುತ್ತಾರೆ’ ಎನ್ನುತ್ತಾರೆ ಕಾಯಿ ಒಡೆಯುವ ಗುರು ಜಂಗಮಕೋಟೆಯ ಸಿದ್ಧಲಿಂಗಸ್ವಾಮಿ.