ಸರ್ಕಾರದಿಂದ ಜಮೀನು ಮಂಜೂರಾತಿಗಾಗಿ ಶಿಡ್ಲಘಟ್ಟ ತಾಲ್ಲೂಕು ಕಚೇರಿಯ ಮುಂದೆ ನಿವೃತ್ತ ಸೈನಿಕ ಆರ್ ವಿ ಮಂಜುನಾಥ್ ಕಳೆದ ಹದಿನೈದು ದಿನಗಳಿಂದ ಧರಣಿ ನಡೆಸುತ್ತಿರುವ ಬಗ್ಗೆ ಸಂಸದ ಮುನಿಸ್ವಾಮಿ ಅವರು ತಹಶೀಲ್ದಾರ್ ದಯಾನಂದ್ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಬುಧವಾರ ಬಿಜೆಪಿ ಪಕ್ಷದಿಂದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ತಡವಾಗಿ ಆಗಮಿಸಿದ ಅವರು ಕಾರ್ಯಕರ್ತರನ್ನು ಮಾತನಾಡಿಸಿದ ನಂತರ, ಧರಣಿ ಕುಳಿತ ನಿವೃತ್ತ ಸೈನಿಕನ ಬಗ್ಗೆ ಪತ್ರಿಕೆಗಳಿಂದ ತಿಳಿದುಬಂದಿದ್ದು, ಆ ಬಗ್ಗೆ ತಹಶೀಲ್ದಾರರಿಗೆ ಕರೆ ಮಾಡಿ ಇನ್ನು ಎರಡು ಮೂರು ದಿನದಲ್ಲಿ ಜಾಗ ಮಾಡಿಕೊಡಬೇಕೆಂದು ತಾಕೀತು ಮಾಡಿದರು.
ನಂತರ ಈ ಬಗ್ಗೆ ಮಾತನಾಡಿದ ಸಂಸದ ಮುನಿಸ್ವಾಮಿ ಅವರು, “ತಹಶೀಲ್ದಾರ್ ಅವರನ್ನು ಮಾತನಾಡಿದ ನಂತರ ಜಿಲ್ಲಾಧಿಕಾರಿಯವರನ್ನೂ ಸಹ ಮಾತನಾಡಿದೆ. ನೀವೇ ಖುದ್ದಾಗಿ ಅವರ ದಾಖಲೆಗಳನ್ನು ಪರಿಶೀಲಿಸಿ, ಸ್ಥಳವನ್ನು ನೋಡಿ, ಅವರಿಗೆ ಸೂಕ್ತ ಜಮೀನನ್ನು ಮಾಡಿಕೊಡಿ ಎಂದು ಅವರಿಗೆ ಹೇಳಿದ್ದೇನೆ. ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯೋಧರನ್ನು ಬಿಟ್ಟುಕೊಟ್ಟುವ ಪ್ರಮೇಯವೇ ಇಲ್ಲ. ಎರಡು ಮೂರು ದಿನ ನೋಡುತ್ತೇನೆ, ಅವರಿಗೆ ಜಮೀನು ಕೊಡದಿದ್ದರೆ, ನಾನೇ ಖುದ್ದಾಗಿ ಬಂದು ಅವರೊಂದಿಗೆ ಧರಣಿ ಕುಳಿತುಕೊಳ್ಳುತ್ತೇನೆ” ಎಂದು ಹೇಳಿದರು.
- Advertisement -
- Advertisement -
- Advertisement -