Home News ತಾತಹಳ್ಳಿ ಸರ್ಕಾರಿ ಶಾಲೆಯಲ್ಲಿ ಚಿಣ್ಣರ ಸಂಭ್ರಮ

ತಾತಹಳ್ಳಿ ಸರ್ಕಾರಿ ಶಾಲೆಯಲ್ಲಿ ಚಿಣ್ಣರ ಸಂಭ್ರಮ

0

ಗ್ರಾಮದ ಯುವಕರು ಶಾಲೆಯ ಬೆನ್ನೆಲುಬಾಗಿ ನಿಂತಿರುವುದು ಮಾದರಿಯಾಗಿದೆ. ಶಾಲೆಯು ದೇಗುಲದಂತೆ. ನಮ್ಮ ಮಕ್ಕಳ ಮಾನಸಿಕ ಬೆಳವಣಿಗೆಯ ತಾಣವಾದ ಶಾಲೆಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಮುದಾಯದ ಸಹಕಾರ ಅಗತ್ಯ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲೆ ಮತ್ತು ಜೈಭಾರತ್‌ ಯುವಕರ ಸಂಘದ ಸಹಭಾಗಿತ್ವದಲ್ಲಿ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸುವ ಚಿಣ್ಣರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರದಿಂದ ನಾವು ಸಾಕಷ್ಟು ಪಾಠ ಕಲಿಯಬಹುದಾಗಿದೆ. ಜೇನು ನೊಣ ಮತ್ತು ಇರುವೆಗಳ ಬದುಕಿನಿಂದ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಒಗ್ಗಟ್ಟಿದ್ದರೆ ಶಕ್ತಿಯಿರುತ್ತದೆ. ಆ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸುವ ಮೂಲಕ ಗ್ರಾಮದ ಜೈಭಾರತ್‌ ಯುವಕರ ಸಂಘದ ಸದಸ್ಯರು ಶಾಲೆಯ ಬೆಳವಣಿಗೆಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎನ್‌.ವೆಂಕಟೇಶಪ್ಪ ಮಾತನಾಡಿ, ಮಕ್ಕಳನ್ನು ಪಠ್ಯಪುಸ್ತಕಗಲಿಗೆ ಮಾತ್ರ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಹ ವೇದಿಕೆಗಳನ್ನು ಶಿಕ್ಷಕರು ಕಲದಪಿಸಿಕೊಡುವುದು ಸೂಕ್ತ. ಇಂಥಹ ವಾತಾವರಣ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಲ್ಪಿಸಿದಲ್ಲಿ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎನ್‌.ಸುಮಾ ಮಾತನಾಡಿ, ಇಲಾಖೆ ಮಕ್ಕಳಿಗೆ ಹಲವಾರು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅವರ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಪೋಷಕರು ಖಾಸಗಿ ಶಾಲೆಗಳ ಬಗೆಗಿನ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಂತೆ ವಿನಂತಿಸಿದರು.
ಜೈಭಾರತ್‌ ಯುವಕರ ಸಂಘದ ಸದಸ್ಯರು ಶಿಕ್ಷಕರನ್ನು ಗೌರವಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಕ್ಕಳಿಗೆ ತರಬೇತಿ ನೀಡಿದ ಗ್ರಾಮದ ಚೈತ್ರಾ ಮತ್ತು ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಇಸಿಓ ಡಿ.ಎಸ್‌.ಲಕ್ಷ್ಮೀನರಸಿಂಹಗೌಡ, ಬೈರಾರೆಡ್ಡಿ, ಸಿ.ಆರ್‌.ಪಿ ಎಸ್‌.ಸುರೇಶ್‌ಬಾಬು, ಆರ್‌.ಟಿ.ಇ ಕಾರ್ಯದರ್ಶಿ ಸತೀಶ್‌, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ, ಶಿಕ್ಷಕರಾದ ಜೆ.ಶ್ರೀನಿವಾಸ್‌, ಎಸ್‌.ಕಲಾಧರ್‌, ಮುಖ್ಯಶಿಕ್ಷಕಿ ಸರಸ್ವತಮ್ಮ, ಶಿಕ್ಷಕರಾದ ಎಂ.ದೇವರಾಜ್‌, ಡಿ.ಎಸ್‌.ಶ್ರೀಕಾಂತ್‌, ಎಚ್‌.ಆರ್‌.ಮಂಜುನಾಥ್‌, ಕೆ.ಶ್ರೀನಿವಾಸಯಾದವ್‌, ಎ.ತ್ರಿವೇಣಿ, ಕೆ.ಎ.ನಾಗರಾಜ್‌, ಅಂಗನವಾಡಿ ಶಿಕ್ಷಕಿ ನಾಗರತ್ನಮ್ಮ, ಜೈಭಾರತ್‌ ಯುವಕರ ಸಂಘದ ಸದಸ್ಯರು ಮತ್ತಿತರರು ಹಾಜರಿದ್ದರು.