Home News ತಾದೂರು ಗ್ರಾಮದಲ್ಲಿ ಕೃಷ್ಣಮೃಗದ ರಕ್ಷಣೆ

ತಾದೂರು ಗ್ರಾಮದಲ್ಲಿ ಕೃಷ್ಣಮೃಗದ ರಕ್ಷಣೆ

0

ತಾಲ್ಲೂಕಿನ ತಾದೂರು ಗ್ರಾಮದಲ್ಲಿ ಕೃಷ್ಣಮೃಗವನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾರೆ.
ಶುಕ್ರವಾರ ರಾತ್ರಿ ನೀರಿಗಾಗಿ ಬಂದು ತಾದೂರು ಗ್ರಾಮದ ಮುರಳಿ ಎಂಬುವರ ತೋಟದಲ್ಲಿ ನೀರಿರುವ ಕೃಷಿಹೊಂಡಕ್ಕೆ ಬಿದ್ದಿದ್ದ ಕೃಷ್ಣಮೃಗವನ್ನು ಗ್ರಾಮಸ್ಥರ ಸಹಾಯದಿಂದ ಹುಷಾರಾಗಿ ಹೊರಕ್ಕೆ ತೆಗೆದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿ ಕೃಷ್ಣಮೃಗಕ್ಕೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ.
‘ಗ್ರಾಮಸ್ಥರಾದ ರಘು, ಪ್ರಭಾಕರ, ವೇಣುಗೋಪಾಲ, ವೆಂಕಟೇಶ್, ನಾಗರಾಜ, ಮುನಿಕೃಷ್ಣ, ಅನಿಲ್ಕುಮಾರ್, ನಟರಾಜ, ಸುರೇಶ್ ಸಹಕರಿಸಿದ್ದರಿಂದ ಕೃಷಿಹೊಂಡದಿಂದ ಕೃಷ್ಣಮೃಗವನ್ನು ಹೊರಕ್ಕೆ ತೆಗೆದೆವು. ಕೃಷಿಹೊಂಡವನ್ನು ಮೆಶ್ನಿಂದ ಮುಚ್ಚಿದ್ದರೂ ಅದು ಹೇಗೆ ನುಸುಳಿತೋ ತಿಳಿಯದು. ನಮ್ಮ ಗ್ರಾಮದ ಸುತ್ತ ಕಾಡಿದೆ. ಅಲ್ಲಿ ಕೃಷ್ಣಮೃಗಗಳು, ಜಿಂಕೆಗಳು, ನವಿಲುಗಳಿವೆ. ನಾವೂ ಬಹಳಷ್ಟು ನೋಡಿದ್ದೇವೆ. ಬೇಸಿಗೆಯ ಬೇಗೆ ಅವಕ್ಕೂ ತಟ್ಟಿದೆ. ನೀರನ್ನರಸಿ ಅವು ಗ್ರಾಮಕ್ಕೆ ಬರುವುದಲ್ಲಿದೆ ಈ ರೀತಿ ನೀರಿನ ಹೊಂಡಕ್ಕೆ ಬಿದ್ದು, ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತವೆ. ಅರಣ್ಯದಲ್ಲಿ ತಾತ್ಕಾಲಿಕ ನೀರಿನ ಹೊಂಡಗಳನ್ನು ರಚಿಸಿ ಟ್ಯಾಂಕರಿನಿಂದ ನೀರು ಹಾಕಿ ಪ್ರಾಣಿ ಪಕ್ಷಿಗಳಿಗೆ ಸಹಾಯ ಮಾಡಬೇಕು’ ಎಂದು ಮುರಳಿ ತಿಳಿಸಿದರು.

error: Content is protected !!