Home News ತಾಲ್ಲೂಕಿಗೆ ವಲಸೆ ಬಂದಿರುವ ಆಂಧ್ರದ ಕುರಿಕಾರರು, ಮೇವು ತಿನ್ನುತ್ತಾ ಜಮೀನನ್ನು ಫಲವತ್ತುಗೊಳಿಸುತ್ತಿವೆ ಕುರಿಗಳು

ತಾಲ್ಲೂಕಿಗೆ ವಲಸೆ ಬಂದಿರುವ ಆಂಧ್ರದ ಕುರಿಕಾರರು, ಮೇವು ತಿನ್ನುತ್ತಾ ಜಮೀನನ್ನು ಫಲವತ್ತುಗೊಳಿಸುತ್ತಿವೆ ಕುರಿಗಳು

0

ನೆರೆಯ ಆಂಧ್ರಪ್ರದೇಶದ ಕುರಿಕಾರರು ತಮ್ಮ ಕುರಿಗಳೊಂದಿಗೆ ತಾಲ್ಲೂಕಿಗೆ ವಲಸೆ ಬಂದಿದ್ದಾರೆ. ಕುರಿಗಳು ಉಚಿತವಾಗಿ ಮೇವು ತಿನ್ನುತ್ತಿಲ್ಲ. ಅವು ಇಲ್ಲಿನ ಜಮೀನನ್ನು ಫಲವತ್ತುಗೊಳಿಸುವ ಕಾಯಕದಲ್ಲಿ ತೊಡಗಿವೆ.
ಅನಂತಪುರ ಜಿಲ್ಲೆಯ ಶಿವಣ್ಣ ಮತ್ತು 20 ಮಂದಿ ತಮ್ಮ ಎರಡು ಸಾವಿರ ಕುದುರೆಗಳು, 8 ಕಾವಲು ನಾಯಿಗಳು, ಸಾಮಾನು ಸರಂಜಾಮು ಸಾಗಿಸಲು 20 ಕತ್ತೆಗಳೊಂದಿಗೆ ಹಂಡಿಗನಾಳದ ಬಳಿ ಜಮೀನೊಂದರಲ್ಲಿ ಬೀಡುಬಿಟ್ಟಿದ್ದಾರೆ.
ಅಲ್ಲಿ ಆಂಧ್ರದಲ್ಲಿ ಕುರಿಗಳಿಗೆ ನೀರು, ಮೇವಿನ ಸಮಸ್ಯೆ ಉಂಟಾದಾಗ ಗಡಿ ದಾಟಿ ಬರುತ್ತಾರೆ. ಗಡಿ ಸಮೀಪದ ಗ್ರಾಮಗಳಲ್ಲಿ ಮಾತ್ರವಲ್ಲ, ಸುಮಾರು ಆರು ತಿಂಗಳ ಕಾಲ ಮಳೆ ಬರುವವರೆಗೂ ಕರ್ನಾಟಕದ ಮೂರ್ನಾಕು ಜಿಲ್ಲೆಗಳನ್ನು ಸುತ್ತುತ್ತಾ ಬಂದು ಕುರಿ ಮೇಯಿಸುತ್ತಾರೆ. ಕುರಿಗಳು ಎರಡು ಸಾವಿರ ಸಂಖ್ಯೆಯಲ್ಲಿರುವುದರಿಂದ ಯಾವುದಾದರೂ ಒಂದು ಹಳ್ಳಿಯನ್ನು ಆರಿಸಿಕೊಂಡು, ಜಮೀನಿನ ಒಡೆಯನೊಂದಿಗೆ ಮಾತನಾಡಿ ರಾತ್ರಿ ಹೊತ್ತು ನೆಲೆಸುತ್ತಾರೆ.
ಕುರಿಹಿಂಡುಗಳೊಂದಿಗೆ ಸಾಕು ನಾಯಿಯನ್ನೂ ಕರೆದುಕೊಂಡು ಬಂದಿದ್ದಾರೆ. ಕುರಿಗಳನ್ನು ನಾಯಿಗಳೇ ನಿಯಂತ್ರಿಸುತ್ತಿವೆ. ಬೆಳಿಗ್ಗೆಯಿಂದ ಸಂಜೆವರೆಗೆ ಕುರಿಗಾರರು ಒಟ್ಟಾಗಿ ತಮ್ಮ ಕುರಿಗಳನ್ನು ಒಂದೆಡೆ ಮೇಯಿಸಿಕೊಂಡಿರುತ್ತಾರೆ. ಮರಿಗಳಿಗಾಗಿಯೇ ಬಲೆಯ ರೀತಿಯಲ್ಲಿ ಕೂಡಿಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಈ ಕುರಿಕಾರರು ರೈತನ ಜಮೀನಲ್ಲಿ ರಾತ್ರಿ ಹೊತ್ತು ಕುರಿಗಳನ್ನು ಮಂದೆ ಹಾಕುತ್ತಾರೆ. ನೂರಾರು ಕುರಿಗಳು ಹಾಕುವ ಹಿಕ್ಕೆಯಿಂದ ಜಮೀನು ಫಲವತ್ತಾಗುತ್ತದೆ. ಅದಕ್ಕೆ ಬದಲಾಗಿ ರೈತ ಕುರಿಕಾರರಿಗೆ ಅಂದು ರಾತ್ರಿ ಹಾಗೂ ಮರುದಿನ ಬೆಳಿಗ್ಗೆ ಊಟಕ್ಕೆ ಅಕ್ಕಿಯನ್ನು ನೀಡುತ್ತಾರೆ. ಊಟದ ಜೊತೆಗೆ ಒಂದಿಷ್ಟು ಹಣ ನೀಡಿ ಮಂದೆ ಹಾಕಿಸುವುದುಂಟು.
‘ನಾವು ನಾಲ್ಕು ತಂಡಗಳಾಗಿ ಒಟ್ಟು 20 ಮಂದಿ ಬಂದಿದ್ದೇವೆ. ಆಂಧ್ರದ ಅನಂತಪುರ ಜಿಲ್ಲೆಯಿಂದ ಹೊರಟು ಎರಡು ತಿಂಗಳುಗಳಾದವು. ಅನುಪಮ್‌ಪಲ್ಲಿ, ಪಾಳ್ಯ, ಒಡೇರಹಳ್ಳಿ, ಮಧುಗಿರಿ, ಶೆಟ್ಟಹಳ್ಳಿ, ಯಾದಗಿರಿ, ಕೋಡ್ಲಳ್ಳಿ, ಲಂಕೇನಹಳ್ಳಿ, ಆರೂಡಿ, ಉರಗುಂಟೆ, ಘಾಟಿ, ಚಿಕ್ಕಬಳ್ಳಾಪುರ, ಜಾತವಾರಗಳಲ್ಲಿ ತಂಗಿದ್ದು ಈಗ ಹಂಡಿಗನಾಳದಲ್ಲಿ ಮಂದೆ ಹಾಕಿದ್ದೇವೆ. ಜಮೀನಿನವರು ನಮಗೆ 5 ಕೆ.ಜಿ ಅಕ್ಕಿ ಮತ್ತು 500 ರೂಗಳನ್ನು ಕೊಡುತ್ತಾರೆ. ಇಲ್ಲಿಂದ ಮುಂದೆ ವಿಜಯಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ ಹೀಗೆ ಸಾಗುತ್ತೇವೆ. ಮಕ್ಕಳನ್ನು ಊರಲ್ಲೇ ಬಿಟ್ಟು ಬರುತ್ತೇವೆ. ಆರು ತಿಂಗಳು ನಮ್ಮೂರಲ್ಲಿದ್ದರೆ, ಆರು ತಿಂಗಳು ಅಲೆಮಾರಿಗಳಾಗಿರುತ್ತೇವೆ’ ಎಂದು ಕುರಿ ಮಂದೆಯೊಂದಿಗೆ ಬಂದಿರುವ ಶಿವಣ್ಣ.
‘ಆಂಧ್ರಪ್ರದೇಶದ ಕುರಿಗಳು ಬಂದರೆ ಇಲ್ಲಿನ ರೈತರು ಮುಗಿಬಿದ್ದು ತಮ್ಮ ಜಮೀನಲ್ಲಿ ಮಂದೆ ಹಾಕಿಸುತ್ತಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬರುವ ಕುರಿಗಳು ಈ ಬಾರಿ ಬೇಗ ಬಂದಿವೆ, ತಮ್ಮ ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಸುಧಾರಿಸುವವರೆಗೆ ಉಳಿದುಕೊಳ್ಳುತ್ತವೆ. ಸಾಕಷ್ಟು ಕುರಿಗಳು ಮರಿ ಹಾಕುತ್ತವೆ. ಸಿಕ್ಕಿದ್ದನ್ನು ತಿಂದು ಕೊಬ್ಬುತ್ತವೆ. ಕುರಿಕಾರರಿಗೆ ಒಳ್ಳೆ ಲಾಭ ತರುತ್ತವೆ. ನಮ್ಮ ತೋಟಗಳನ್ನು ಫಲವತ್ತುಗೊಳಿಸಿ ಹೋಗುತ್ತವೆ’ ಎನ್ನುತ್ತಾರೆ ರೈತ ಜಯರಾಮ್‌.
‘ಇವರು ಪ್ರತಿ ವರ್ಷ ಬರುವುದರಿಂದ ಇಲ್ಲಿನ ಗ್ರಾಮೀಣ ಜನರಿಗೆ ಪರಿಚಿತರಾಗಿರುತ್ತಾರೆ. ಭಾಷೆಯ ತೊಡಕು ಇಲ್ಲದ ಕಾರಣ ಇಲ್ಲಿನ ಜನರೊಂದಿಗೆ ಬೆರೆಯುತ್ತಾರೆ. 500 ಕುರಿಗಳ ಹಿಂಡು ಒಂದು ರಾತ್ರಿ ಒಂದು ತೋಟದಲ್ಲಿ ಬೀಡು ಬಿಟ್ಟರೆ ಕನಿಷ್ಠ ಒಂದು ಎತ್ತಿನ ಗಾಡಿಯಷ್ಟು ಕುರಿ ಹಿಕ್ಕೆ ತೋಟಕ್ಕೆ ಬೀಳಲಿದೆ’ ಎಂದು ಅವರು ಹೇಳಿದರು.

error: Content is protected !!