Home News ತಾಲ್ಲೂಕಿನಲ್ಲಿ ಉತ್ತಮ ಸ್ಥಳವನ್ನು ಗುರುತಿಸಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸಲು ಮನವಿ

ತಾಲ್ಲೂಕಿನಲ್ಲಿ ಉತ್ತಮ ಸ್ಥಳವನ್ನು ಗುರುತಿಸಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಿರ್ಮಿಸಲು ಮನವಿ

0

ನಗರದಿಂದ ಹೊರಗೆ ತಾಲ್ಲೂಕಿನಲ್ಲಿ ವಿಶಾಲವಾದ ಪ್ರದೇಶವನ್ನು ಗುರುತಿಸಿ ಶಿಡ್ಲಘಟ್ಟ ತಾಲ್ಲೂಕಿಗೆಂದು ಮಂಜೂರಾಗಿರುವ ಹೈಟೆಕ್ ಮಾರುಕಟ್ಟೆಯನ್ನು ಕೂಡಲೇ ನಿರ್ಮಾಣ ಮಾಡಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸದಸ್ಯರು ಒತ್ತಾಯಿಸಿ ರೇಷ್ಮೆ ಇಲಾಖೆಯ ಆಯುಕ್ತರಿಗೆ, ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ ಮುಖಾಂತರ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆ ಏಷಿಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ಅತಿ ಹೆಚ್ಚಿನ ರೇಷ್ಮೆ ಗೂಡು ಇಲ್ಲಿ ವಹಿವಾಟಾಗುತ್ತಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ರೈತರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ರೇಷ್ಮೆ ಕೃಷಿಕರ ಬಹುದಿನಗಳ ಬೇಡಿಕೆಯಾದ ಹೈಟೆಕ್ ಮಾರುಕಟ್ಟೆಯನ್ನು ಇಲಾಖಾ ವತಿಯಿಂದ ಸುಮಾರು ಮೂರು ವರ್ಷಗಳ ಹಿಂದೆಯೇ ಮಂಜೂರು ಮಾಡಲಾಗಿದ್ದರೂ ಅನುಷ್ಠಾನಗೊಳಿಸದಿರುವುದರಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ.
ರೇಷ್ಮೆ ಗೂಡಿನ ಮಾರುಕಟ್ಟೆ ನಗರದ ಮಧ್ಯಭಾಗದಲ್ಲಿದ್ದು ಸೂಕ್ತ ರಸ್ತೆ ಸಂಪರ್ಕವಿಲ್ಲದೆ ರೇಷ್ಮೆ ಗೂಡಿನ ಸಾಗಾಟಕ್ಕೆ ತೊಂದರೆಯಾಗಿದೆ. ರೇಷ್ಮೆ ಗೂಡಿನ ವಹಿವಾಟಿಗೆ ತಕ್ಕಹಾಗೆ ಮಾರುಕಟ್ಟೆ ಪ್ರದೇಶದಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದೇ ಇರುವುದರಿಂದ ರೈತರಿಗೆ ಪ್ರಯಾಸವಾಗುತ್ತಿದೆ. ನಿರಂತರವಾಗಿ ಮೂಲಭೂತ ಸಮಸ್ಯೆಗಳಾದ ಶೌಚಾಲಯ, ಕುಡಿಯುವ ನೀರು, ರಾತ್ರಿ ವೇಳೆ ದೂರದ ರೈತರಿಗೆ ತಂಗುದಾಣ ಮುಂತಾದ ಸಮಸ್ಯೆಗನ್ನು ನಿವಾರಿಸುವಂತೆ ಹಲವಾರು ಮನವಿಯನ್ನು ಕೊಟ್ಟಿದ್ದರೂ ಸಹ ಇದುವರೆಗೂ ಈಡೇರಿಸಿಲ್ಲ. ಅನಧಿಕೃತ ವ್ಯಕ್ತಿಗಳು ಪದೇಪದೇ ಮಾರುಕಟ್ಟೆಯನ್ನು ಪ್ರವೇಶಿಸಿ ಇಲ್ಲಿನ ಸಾಮರಸ್ಯ ವಾತಾವರಣವನ್ನು ಕದಡುತ್ತಿರುವುದರಿಂದ ರೈತರಿಗೆ ಪ್ರತಿನಿತ್ಯ ನೆಮ್ಮದಿ ಇಲ್ಲದಂತಾಗಿದೆ.
ಇವೆಲ್ಲಾ ಕಾರಣಗಳಿಂದ ನಗರದಿಂದ ಹೊರಗೆ ತಾಲ್ಲೂಕಿನಲ್ಲಿ ಉತ್ತಮ ಸ್ಥಳವನ್ನು ಆಯ್ಕೆ ಮಾಡಿ ತುರ್ತಾಗಿ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಬೇಕು. ವಿಳಂಬವಾದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ತಾದೂರು ಮಂಜುನಾಥ್, ವೇಣುಗೋಪಾಲ್, ದೇವರಾಜ, ಮೂರ್ತಿ, ರಾಮಚಂದ್ರ, ರಾಮಕೃಷ್ಣಪ್ಪ, ತಮ್ಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.