Home News ತಾಲ್ಲೂಕು ಆಡಳಿತದಿಂದ ಒಂದು ಲಕ್ಷ ಗಿಡ ನೆಡುವ ಅಭಿಯಾನ

ತಾಲ್ಲೂಕು ಆಡಳಿತದಿಂದ ಒಂದು ಲಕ್ಷ ಗಿಡ ನೆಡುವ ಅಭಿಯಾನ

0

ವಿವಿಧ ಇಲಾಖೆಗಳ ಸಹಯೋಗವನ್ನು ಪಡೆದುಕೊಂಡು ತಾಲ್ಲೂಕಿನಾದ್ಯಂತ ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತ ಕೈಗೊಂಡಿದೆ. ಅದಕ್ಕೆ ನಾವೂ ಕೈಜೋಡಿಸಲಿದ್ದೇವೆ ಎಂದು ಜೆಎಂಎಫ್‌ಸಿ ಮತ್ತು ಸಿವಿಲ್‌ ನ್ಯಾಯಾಧಿಶರಾದ ಟಿ.ಎಲ್‌.ಸಂದೀಶ್‌ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ, ನಗರಸಭೆ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡವನ್ನು ನೆಟ್ಟು ಅವರು ಮಾತನಾಡಿದರು.
ಗಿಡವನ್ನು ನೆಟ್ಟಾಗ ಅಲ್ಲಿ ಹತ್ತಿರ ಇರುವವರಿಗೆ ಅದನ್ನು ಕೆಲ ಕಾಲ ಪೋಷಿಸಲು ತಿಳಿಹೇಳಬೇಕು. ಸ್ವಲ್ಪ ಆರೈಕೆ ಮಾಡಿದರೆ ಸಾಕು ಗಿಡ ಬೆಳೆದು ಮರವಾಗಿ ಮುಂದಿನ ಪೀಳಿಗೆಗೆ ಒಳ್ಳೆಯ ಗಾಳಿ, ನೆರಳು ನೀಡುತ್ತದೆ. ಪಕ್ಷಿಗಳಿಗೆ ಆಸರೆಯಾಗುತ್ತದೆ. ಮಳೆ ಬರಲು ಕಾರಣವಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಮಾತನಾಡಿ, ತಾಲ್ಲೂಕಿನ ವಿವಿದೆಡೆ ಶಾಲೆಗಳು ಮತ್ತು ಅಂಗನವಾಡಿ ಜಾಗದಲ್ಲಿ ಒಟ್ಟಾರೆಯಾಗಿ 22 ಸಾವಿರ ಗಿಡಗಳನ್ನು ಈ ದಿನ ನೆಡಲಿದ್ದೇವೆ. ತಾತಹಳ್ಳಿ ಅರಣ್ಯ ಪ್ರದೇಶದಲ್ಲಿದ್ದ ನೀಲಗಿರಿ ಮರಗಳನ್ನು ತೆಗೆಸಿದ್ದು ಅಲ್ಲಿನ ನೂರು ಎಕರೆ ಪ್ರದೇಶದಲ್ಲಿ ಮತ್ತು ತಾಲ್ಲೂಕಿನ ವಿವಿದೆಡೆ ಇರುವ ಗುಂಡು ತೋಪುಗಳನ್ನು ಆಯ್ಕೆ ಮಾಡಿಕೊಂಡಿದ್ದು 150 ಎಕರೆ ಗುಂಡು ತೋಪುಗಳಲ್ಲಿ ಗಿಡಗಳನ್ನು ನೆಡುತ್ತೇವೆ. ಒಟ್ಟಾರೆ ಒಂದು ಲಕ್ಷ ಗಿಡಗಳನ್ನು ನೆಡುತ್ತೇವೆ. ಸಾರ್ವಜನಿಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ವಿವಿಧ ಶಾಲಾ ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳ ತಂಡ ಹಾಗೂ ಸಾರ್ವಜನಿಕರು ನ್ಯಾಯಾಲಯದ ಆವರಣದಿಂದ ಜಾಥಾ ನಡೆಸಿದರು. ಅಶೋಕ ರಸ್ತೆಯ ದ್ವಿಮುಖ ಗಣಪತಿ ದೇವಸ್ಥಾನದ ಬಳಿ ಹಾಗೂ ನಗರದ ವಿವಿದೆಡೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟರು. ನ್ಯಾಯಾಧೀಶರ ಮುಖಾಂತರ ನಗರ ಸಭೆಯ ವತಿಯಿಂದ ರಸ್ತೆ ಬದಿಯ ತಳ್ಳುವ ಗಾಡಿ ಹಾಗೂ ಅಂಗಡಿಗಳನ್ನು ಇಟ್ಟುಕೊಂಡಿರುವವರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ವಲಯ ಅರಣ್ಯ ಅಧಿಕಾರಿ ಶ್ರೀಲಕ್ಷ್ಮಿ, ಅರಣ್ಯ ರಕ್ಷಕ ರಾಮಾಂಜನೇಯುಲು, ನಗರಸಭೆ ಆಯುಕ್ತ ಚಲಪತಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಲೋಕೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು, ಸಬ್‌ಇನ್ಸ್‌ಪೆಕ್ಟರ್‌ಗಳಾದ ನವೀನ್‌, ಪ್ರದೀಪ್‌ ಪೂಜಾರಿ, ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಸಿಡಿಪಿಒ ಲಕ್ಷ್ಮೀದೇವಮ್ಮ ಹಾಜರಿದ್ದರು.