Home News ತಾಲ್ಲೂಕು ಕಛೇರಿಗೆ ವಿನಾಕಾರಣ ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸಬಾರದು

ತಾಲ್ಲೂಕು ಕಛೇರಿಗೆ ವಿನಾಕಾರಣ ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸಬಾರದು

0

ವಿನಾಕಾರಣ ರೈತರು ಸೇರಿದಂತೆ ನಾಗರಿಕರನ್ನು ತಾಲ್ಲೂಕು ಕಛೇರಿಗೆ ಅಲೆಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತ್ವರಿತವಾಗಿ ಅವರ ಕೆಲಸ ಕಾರ್ಯಗಳನ್ನು ಮುಗಿಸಿ ಕೊಡುವಲ್ಲಿ ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ವಿವಿಧ ನಾಗರಿಕರ ಕುಂದುಕೊರತೆ ವಿಚಾರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿಧ ರೈತರು ಮತ್ತು ಸಾರ್ವಜನಿಕರು ತಮ್ಮ ಜಮೀನಿನ ಫಹಣಿ, ದಾಖಲೆಗಳಲ್ಲಿ ಸಣ್ಣಪುಟ್ಟ ತಿದ್ದುಪಡಿಗಳಿದ್ದಲ್ಲಿ ಗ್ರಾಮ ಸಹಾಯಕರು ಸೇರಿದಂತೆ ರಾಜಸ್ವ ನಿರೀಕ್ಷಕರು ತಕ್ಷಣ ಮಾಡಿಕೊಡಬೇಕು ಎಂದರು.
ತಾಲ್ಲೂಕಿನಾದ್ಯಂತ ಕೆರೆಗಳು, ಕುಂಟೆಗಳು ಹಾಗು ಕಲ್ಯಾಣಿಗಳ ಒತ್ತುವರಿಯಾಗಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದು ಆದ್ಯತೆಯ ಮೇರೆಗೆ ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು.
ನಾಗರಿಕರು ಎಲ್ಲೆಲ್ಲಿ ಅಕ್ರಮವಾಗಿ ಮನೆಗಳು ಕಟ್ಟಿಕೊಂಡಿದ್ದಾರೋ ಅಂತಹವರಿಗೆ ೯೪ ಸಿ ಯಲ್ಲಿ ಅರ್ಜಿ ಹಾಕುವಂತೆ ಗ್ರಾಮ ಲೆಕ್ಕಾಧಿಕಾರಿ ಹಾಗು ರಾಜಸ್ವ ನಿರೀಕ್ಷಕರು ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಾದ್ಯಂತ ಪ್ರತಿ ಗ್ರಾಮದಲ್ಲಿಯೂ ಗ್ರಾಮ ಚಾವಡಿ ಗುರುತಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಗಳನ್ನು ಆಯಾ ಗ್ರಾಮ ಚಾವಡಿಗಳಲ್ಲಿ ನಡೆಯುವುದರಿಂದ ಗ್ರಾಮ ಚಾವಡಿಗಳನ್ನು ಸದೃಡಗೊಳಿಸಬೇಕು ಎಂದರು.
ಗ್ರಾಮ ಲೆಕ್ಕಾಧಿಕಾರಿಗಳು ವಾರಕ್ಕೆ ಕನಿಷ್ಠ ಎರಡು ಭಾರಿಯಾದರೂ ಗ್ರಾಮ ಚಾವಡಿಗೆ ಭೇಟಿ ನೀಡಬೇಕು. ರಾಜಸ್ವ ನಿರೀಕ್ಷಕರು ವಾರಕ್ಕೆ ಒಂದು ಭಾರಿ ಭೇಟಿ ನೀಡಬೇಕು. ಗ್ರಾಮ ಲೆಕ್ಕಾಧಿಕಾರಿ ಹಾಗು ರಾಜಸ್ವ ನಿರೀಕ್ಷಕರು ಗ್ರಾಮ ಚಾವಡಿಗೆ ಯಾವ ದಿನ ಭೇಟಿ ನೀಡಿದ್ದರು ಎಂಬುದಕ್ಕೆ ಒಂದು ಪಟ್ಟಿ ಸಿದ್ದ ಪಡಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಕಾವೇರಿ, ತಹಸೀಲ್ದಾರ್ ಕೆ.ಎಂ.ಮನೋರಮಾ, ತಾಲ್ಲೂಕು ಪಂಚಾಯಿತಿ ಇ ಓ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.