ತಾಲ್ಲೂಕಿನ ಹಂಡಿಗನಾಳ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಭಾನುವಾರ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ಕಸಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ನೀಡಿದ ಕೆ.ಎಸ್.ನಿಸಾರ್ ಅಹಮದ್ ಅವರು, ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತಿ ಪಡೆದು ಕನ್ನಡಿಗರ ಮನೆಮಾತಾಗಿದ್ದರು ಎಂದು ಅವರು ತಿಳಿಸಿದರು.
ಯಾವ ಪಂಥ, ಪಂಗಡಕ್ಕೆ ಕಟ್ಟಿಕೊಳ್ಳದೆ ಸ್ವಚ್ಛಂದವಾಗಿ ಹಕ್ಕಿಯಂತೆ ಕಾವ್ಯ ಕಟ್ಟುತ್ತಾ ಸರ್ವಜನ ಪ್ರಿಯರಾಗಿದ್ದ ನಿಸಾರ್ ಅಹ್ಮದ್ ಅವರ ನಮ್ಮನ್ನು ಅಗಲಿದರೂ ಅವರ ಕಾವ್ಯದ ಮೂಲಕ ನೆಮ್ಮ ನೆನಪಲ್ಲಿ ಸದಾ ಜೀವಂತವಾಗಿದ್ದಾರೆ. ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ. ಅವರ ಜನ್ಮಸ್ಥಳ ದೇವನಹಳ್ಳಿ.
ಸುಮಾರು 25 ಕೃತಿಗಳನ್ನು ರಚಿಸಿದ ಅವರು ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದವರು. ಗಾಂಧಿಬಜಾರ್ ಹಾಗೂ ನಿತ್ಯೋತ್ಸವದ ಮೂಲಕ ಜನರ ಮನದ ಬಾಗಿಲು ತೆರೆದವರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೆ ಭಾಜನರಾಗಿದ್ದ ಅವರು ಕನ್ನಡದ ಎಲ್ಲ ಪ್ರಾಕಾರಗಳನ್ನು ಶ್ರೀಮಂತಗೊಳಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ಅಂಜನ್ ಕುಮಾರ್, ನಾರಾಯಣಸ್ವಾಮಿ, ಮದ್ದಿರೆಡ್ಡಿ ಹಾಜರಿದ್ದರು
