Home News ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ

0

ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಆಂಜಿನಮ್ಮ ಮತ್ತು ಉಪಾಧ್ಯಕ್ಷರಾಗಿ ಡಿ.ಎಸ್‌.ಎನ್‌.ರಾಜು ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಎಂಬ ಮೀಸಲಾತಿ ನಿಗದಿಪಡಿಸಲಾಗಿತ್ತು. ಒಟ್ಟು 16 ತಾಲ್ಲೂಕು ಪಂಚಾಯಿತಿ ಸದಸ್ಯರಿದ್ದು, ಹನ್ನೊಂದು ಮಂದಿ ಕಾಂಗ್ರೆಸ್‌ ಮತ್ತು ಐವರು ಜೆಡಿಎಸ್‌ ಸದಸ್ಯರಿರುವುದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗುವುದು ಖಚಿತವಾಗಿದ್ದರೂ ಆಕಾಂಕ್ಷಿಗಳು ಹಲವರು ಇದ್ದುದರಿಂದ ಯಾರಾಗುವರೆಂಬ ಕಾತರ ಮೂಡಿತ್ತು. ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಯಾರನ್ನು ಬೆಂಬಲಿಸುವರೋ ಎಂಬ ಕುತೂಹಲ ಕೂಡ ಇತ್ತು.
ಈ ಹಿಂದೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಆಗಿದ್ದ ಸರಸ್ವತಮ್ಮ ತಮ್ಮಣ್ಣ ಅವರ ಹೆಸರು ಹೆಚ್ಚಾಗಿ ಕೇಳಿಬಂದರೂ, ಕೊನೆಯ ಕ್ಷಣದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ತೀರ್ಮಾನದಿಂದಾಗಿ ಬಸವಾಪಟ್ಟಣದ ಆಂಜಿನಮ್ಮ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯಿತು. ಕಾಂಗ್ರೆಸ್‌ ಪಕ್ಷದ ಹಿರಿಯ ರಾಜಕಾರಣಿ ಮತ್ತು ದಿಬ್ಬೂರಹಳ್ಳಿ ಕ್ಷೇತ್ರದ ಪ್ರಭಾವಿ ವ್ಯಕ್ತಿಯಾಗಿರುವ ಡಿ.ಎಸ್‌.ಎನ್‌.ರಾಜು ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಹಾಗೂ ಕಾಂಗ್ರೆಸ್‌ ಭವನದ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಕಾಂಗ್ರೆಸ್‌ ಭವನದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಸುದ್ಧಿಗಾರರೊಂದಿಗೆ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಸದಸ್ಯರ ಒಗ್ಗಟ್ಟಿನಿಂದಾಗಿಯೇ ಇಂದು ಅವಿರೋಧ ಆಯ್ಕೆ ನಡೆದಿದೆ. ಅವರಿಗೆ ಕಾಂಗ್ರೆಸ್‌ ಪಕ್ಷದ ವತಿಯಿಂದ ಅಭಿನಂದನೆಗಳು. ಅವರು ಒಗ್ಗಟ್ಟಾಗಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಉಪವಿಭಾಗಾಧಿಕಾರಿ ಕೆ.ಟಿ.ಶಾಂತಲಾ, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಉಮೇಶ್‌, ಚುನಾವಣಾ ಸಹಾಯಕ ರಾಥೋಡ್‌, ನಾಗರಾಜ್‌ ಮತ್ತಿತರರು ಹಾಜರಿದ್ದರು.