Home News ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಂದ ವಿದ್ಯಾರ್ಥಿನಿಲಯದ ಪರಿಶೀಲನೆ

ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಂದ ವಿದ್ಯಾರ್ಥಿನಿಲಯದ ಪರಿಶೀಲನೆ

0

ವಿದ್ಯಾರ್ಥಿನಿಲಯಗಳು ದೇವಾಲಯಗಳಿದ್ದಂತೆ ಅದನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಕೆಲಸವನ್ನು ಸಿಬ್ಬಂದಿ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರದ ಬಳಿಯಿರುವ ಸರ್ಕಾರಿ ಮೆಟ್ರಿಕ್ ನಂತರದ ಕಾಲೇಜು ಬಾಲಕರ ವಿದ್ಯಾರ್ಥಿನಿಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ವಿದ್ಯಾರ್ಥಿನಿಲಯದ ಕಟ್ಟಡ ಉದ್ಘಾಟನೆಯಾಗಿ ಕೇವಲ ಎರಡು ವರ್ಷಗಳಾಗಿದ್ದು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹಾಸ್ಟೆಲ್ ಕೊಠಡಿಗಳೆಲ್ಲಾ ಧೂಳುಮಯವಾಗಿದೆ. ಎಲ್ಲೆಂದಿರಲ್ಲಿ ಎಲೆ ಅಡಿಗೆ ಅಗಿದು ಉಗಿದಿರುವ ಗುರುತುಗಳು, ಹೊಡೆದು ಹಾಕಿರುವ ಕಿಟಿಕಿಗಾಜುಗಳನ್ನು ಕಂಡು ಸಿಬ್ಬಂದಿಯ ವಿರುದ್ದ ಅವರು ಕಿಡಿಕಾರಿದರು.
ಹಾಸ್ಟೆಲ್ ಅಡುಗೆ ಮನೆ ಮತ್ತು ಶೌಚಾಲಯಗಳ ಸ್ವಚ್ಚತೆ ಇಲ್ಲದಿರುವ ಬಗ್ಗೆ ಮತ್ತೊಮ್ಮೆ ದೂರು ಬಂದಲ್ಲಿ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.
ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳ ಹಾಜರಾತಿ, ನಿಲಯದಲ್ಲಿರುವ ನಾಮಫಲಕದಲ್ಲಿ ಯಾವುದೇ ಅಧಿಕಾರಿಯ ಹೆಸರು ನಮೂದಿಸದೇ ಇರುವುದನ್ನು ಕಂಡು ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆ ನಮೂದಿಸುವಂತೆ ಸೂಚಿಸಿದರು.
ಮಳೆ ಬಂದಾಗ ಮಳೆ ನೀರು ವಿದ್ಯಾರ್ಥಿನಿಲಯಕ್ಕೆ ನುಗ್ಗಿ ತೊಂದರೆ ಉಂಟಾಗುತ್ತಿದ್ದು ಶಾಸಕರಿಗೂ ಸಹ ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದಾಗ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಹಾಸ್ಟೆಲ್ ಮುಂಭಾಗದಲ್ಲಿ ಚರಂಡಿ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಲು ಕ್ರಮ ಜರುಗಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿಯೂ ಸ್ವಚ್ಚತೆ ಇಲ್ಲದಿರುವುದು ಕಂಡು ಸರ್ಕಾರ ಮಕ್ಕಳ ಪೌಷ್ಟಿಕ ಆಹಾರ ತಯಾರಿಕೆಗೆ ಕೋಟ್ಯಾಂತರ ರೂ ಖರ್ಚು ಮಾಡುತ್ತಿದ್ದು, ತಯಾರು ಮಾಡುವ ಘಟಕದ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ವಿದ್ಯಾರ್ಥಿನಿಲಯದ ಸಿಬ್ಬಂದಿ ಗಂಗಾಧರ್ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.