Home News ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ

ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ

0

ಕಕ್ಷಿದಾರರ ಹಿತ ಕಾಪಾಡಲು ಮುಂದಾದ ವಕೀಲರ ಮೇಲೆ ವಿನಾಕಾರಣ ಕೇಸು ದಾಖಲಿಸಿರುವ ಪಿಎಸ್ಸೈ ವಿಕಾಸ್ ರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಕಲಾಪದಿಂದ ಹೊರಗುಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ನೆರೆಯ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದುಕೊಳ್ಳಲು ನ್ಯಾಯಾಲಯದ ಆವರಣದೊಳಗೆ ಆಗಮಿಸಿದ್ದರು. ಆಗ ಗೌನಿಪಲ್ಲಿ ಠಾಣೆಯ ಪಿಎಸ್ಸೈ ವಿಕಾಸ್ ನ್ಯಾಯಾಲಯದಿಂದ ಯಾವುದೇ ಅನುಮತಿ ಪಡೆಯದೇ ಆರೋಪಿಗಳನ್ನು ಬಂಧಿಸಿ ಕರೆದೊಯ್ದಿದ್ದನ್ನು ಪ್ರಶ್ನಿಸಿದ ವಕೀಲರ ವಿರುದ್ಧ ಕಾನೂನು ಬಾಹಿರವಾಗಿ ಕೇಸು ದಾಖಲಿಸಿರುವ ಕ್ರಮವನ್ನು ತಾಲ್ಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಕ್ಷಿದಾರರ ಹಿತ ಕಾಪಾಡುವುದು ವಕೀಲರ ಕರ್ತವ್ಯವಾಗಿದ್ದು ತಮ್ಮ ಕರ್ತವ್ಯದಂತೆ ಪ್ರಶ್ನಿಸಿದ ವಕೀಲರ ವಿರುದ್ದ ದುರುದ್ದೇಶದಿಂದ ಪ್ರಕರಣ ದಾಖಲಿಸಿರುವ ಗೌನಿಪಲ್ಲಿ ಪಿಎಸ್ಸೈ ವಿಕಾಸ್ ಅವರನ್ನು ಸೇವೆಯಿಂದ ಅಮಾನತ್ತು ಮಾಡುವ ಮೂಲಕ ಕಾನೂನು ಕ್ರಮ ಜರುಗಿಸಬೇಕು ಎಂದರು.
ಇಂತಹ ವರ್ತನೆಗಳು ತಮ್ಮ ಇಲಾಖೆಯಲ್ಲಿ ಮತ್ತೆ ನಡೆಯದಂತೆ ಜಾಗ್ರತೆ ವಹಿಸಬೇಕು ಎಂದು ತಾಲ್ಲೂಕು ವಕೀಲರ ಸಂಘದಿಂದ ಅಂಚೆ ಮೂಲಕ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.
ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಪಾಪಿರೆಡ್ಡಿ, ವಕೀಲರಾದ ಬೈರಾರೆಡ್ಡಿ, ಎಂ.ಮಂಜುನಾಥ್ ಹಾಜರಿದ್ದರು.