Home News ತುತ್ತು ಅನ್ನಕ್ಕಾಗಿ ವಲಸೆ ಪಯಣ… ಶ್ರಮ, ನೋವಿನ ನಡುವೆ ಸಾಗಿದೆ ಜೀವನ…

ತುತ್ತು ಅನ್ನಕ್ಕಾಗಿ ವಲಸೆ ಪಯಣ… ಶ್ರಮ, ನೋವಿನ ನಡುವೆ ಸಾಗಿದೆ ಜೀವನ…

0

‘ಹೆಚ್ಚೇನೂ ಆಸೆಪಡದ ಬಡವನಿಗೆ ತನ್ನ ದುಡಿಮೆಯಿಂದ ಗಳಿಸಿದ ಒಂದು ತುತ್ತು ಅನ್ನ ಸಿಕ್ಕರೆ ಸಾಕು. ಆ ಕ್ಷಣ ಸಂಭ್ರಮದಿಂದ ಬದುಕಿಬಿಡುತ್ತಾನೆ’. ಇಂತಹ ಒಂದು ಸಂಭ್ರಮಕ್ಕಾಗಿ ಬಡವ ಊರೂರು ಅಲೆಯುತ್ತಾನೆ. ದೇಶ ಸುತ್ತುತ್ತಾನೆ. ದಿನಪೂರ್ತಿ ಕಷ್ಟಪಟ್ಟ ದುಡಿಮೆಯಿಂದ ಸಿಗುವ ಕ್ಷಣಿಕ ಸುಖ-ಸಂಭ್ರಮ ಅರಸುತ್ತ ಮಧ್ಯಪ್ರದೇಶದ ಕುಟುಂಬವೊಂದು ಶಿಡ್ಲಘಟ್ಟಕ್ಕೆ ಆಗಮಿಸಿದೆ. ಕಮ್ಮಾರಿಕೆಯನ್ನು ನೆಚ್ಚಿಕೊಂಡು ಬದುಕುತ್ತಿರುವ ಈ ಕುಟುಂಬ ಕೆಲ ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಬೀಡುಬಿಟ್ಟಿದೆ.
ಗ್ರಾಮೀಣ ಜನರ ವ್ಯವಸಾಯಕ್ಕೆ ಬೇಕಾದ ಕಬ್ಬಿಣದ ಉಪಕರಣಗಳನ್ನು ತಯಾರಿಸಿ ಮಾರುವ ಈ ಕುಟುಂಬದಲ್ಲಿ ಹಿರಿಯರು-, ಕಿರಿಯರು ಮತ್ತು ಮಕ್ಕಳು ಇದ್ದಾರೆ. ದುಡಿಮೆ ಎಂಬುದು ಕುಟುಂಬದ ಹಿರಿಯನಿಗೆ ಅಥವಾ ಪುರುಷನಿಗೆ ಸೀಮಿತವಾದುದಲ್ಲ. ದುಡಿಮೆಯಲ್ಲಿ ತಮ್ಮದು ಸಹಯೋಗವಿದೆ ಎಂಬಂತೆ ಮಹಿಳೆಯರು ಮತ್ತು ಮಕ್ಕಳು ಸಹ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.
ದೂರದ ಮಧ್ಯಪ್ರದೇಶದ ಭೂಪಾಲ್‌ನಿಂದ ಮನೆ, ಆಪ್ತ ಸದಸ್ಯರನ್ನು, ಅಲ್ಲಿನ ದೈನಂದಿನ ಸಂಸ್ಕೃತಿಯಿಂದ ದೂರಗೊಂಡು ಶಿಡ್ಲಘಟ್ಟಕ್ಕೆ ಬಂದಿರುವ ಈ ಕುಟುಂಬಕ್ಕೆ ಶಾಶ್ವತ ಸೂರು ಇಲ್ಲ. ರಾತ್ರಿ ವೇಳೆ ತಾತ್ಕಾಲಿಕ ಟೆಂಟ್ ಕಟ್ಟಿಕೊಂಡು ಮಲಗುವ ಇವರು ದಿನಪೂರ್ತಿ ಕುಲುಮೆ ಕೆಲಸದಲ್ಲಿ ನಿರತರಾಗಿರುತ್ತಾರೆ. ಒಬ್ಬರು ಉಪಕರಣಗಳ ತಯಾರಿಕೆಯಲ್ಲಿ ಪರಿಣತಿಗಳಿಸಿದ್ದರೆ, ಮತ್ತೊಬ್ಬರು ಅವುಗಳ ಮಾರಾಟದಲ್ಲಿ ಸಿದ್ಧಹಸ್ತರು.
 

ಕಬ್ಬಿಣದ ಕೃಷಿ ಉಪಕರಣಗಳನ್ನು ಮಾರಾಟ ಮಾಡುತ್ತಿರುವುದು.
ಕಬ್ಬಿಣದ ಕೃಷಿ ಉಪಕರಣಗಳನ್ನು ಮಾರಾಟ ಮಾಡುತ್ತಿರುವುದು.

ಕಾರ್ಯ ವಿಧಾನ: ಕಬ್ಬಿಣವನ್ನು ಕುಲುಮೆಯ ಒಲೆಯಲ್ಲಿ ಇಟ್ಟು ಅದರ ಸುತ್ತಲೂ ಇದ್ದಿಲು ಮುಚ್ಚಿ ತಿರುಗಣಿಯನ್ನು ತಿರುಗಿಸುತ್ತಾ ಹೋದಂತೆ ಕಬ್ಬಿಣ ಕೆಂಪಾಗುತ್ತದೆ. ಹದ ಬಂದ ಮೇಲೆ ಇಕ್ಕುಳದ ಸಹಾಯದಿಂದ ಗಟ್ಟಿಯಾಗಿ ಹಿಡಿದು ಅಡಿಗಲ್ಲಿನ ಮೇಲಿಟ್ಟು ಸುತ್ತಿಗೆಯಿಂದ ಬಲವಾದ ಪೆಟ್ಟು ಕೊಡುತ್ತಾರೆ. ಸಣ್ಣ ಸುತ್ತಿಗೆಯಿಂದ ಬಡಿದು ತಿದ್ದಿದ ಮೇಲೆ ಕಬ್ಬಿಣ ಕಠಿಣವಾಗಲೆಂದು ತಕ್ಷಣ ನೀರಿನಲ್ಲಿ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಅದ್ದಿ ನೀರುಬಾನಿಗೆ ಹಾಕಿ ತೆಗೆಯುತ್ತಾರೆ.
ಇವರು ತಯಾರಿಸುವ ಸಾಧನಗಳು: ಕುಡಗೋಲು, ನೆರಗೋಲು, ಗುದ್ದಲಿ, ಸಲಿಕೆ, ಕೊಡಲಿಗಳನ್ನು ಹೆಚ್ಚಾಗಿ ತಯಾರಿಸುವ ಇವರು ನೇಗಿಲಿಗೆ ಬೇಕಾದ ಕುಳ, ಬೆಳೆಗಳ ಸಾಲು ಮಾಡಲು ಪಿಳೆಗುಡ, ಕಸ ಸ್ವಚ್ಛ ಮಾಡಲು ಹೆಗ್ಗುಡ, ಬಿತ್ತಿದ ಮೇಲೆ ಸಾಲು ಮಾಡಲು ಬಳಗುಡ, ಟ್ರಾಕ್ಟರ್ ಬಳಸಿ ಹರಗಲು ಬಳಸುವ ಡಮಗುಂಟೆಗಳನ್ನೂ ತಯಾರಿಸಿ ಕೊಡುವರು.
ಜೀನಾ ಇಸಿ ಕಾ ನಾಮ್ ಹೈ…: ಕಬ್ಬಿಣ ಕಠಿಣಗೊಳಿಸುವ ಕ್ರಿಯೆಯೊಂದಿಗೆ ತಮ್ಮ ಜೀವನವನ್ನು ಹೋಲಿಸಿಕೊಳ್ಳುವ ಇವರು, ‘ನಮಗೆ ಈ ಊರು ಸರಿಯಾಗಿ ಗೊತ್ತಿಲ್ಲ. ಇಲ್ಲಿನ ನೀತಿ, ನಿಯಮ ಮತ್ತು ಸಂಸ್ಕೃತಿ ಬಗ್ಗೆ ಅರಿವಿಲ್ಲ. ಇವತ್ತು ಈ ಊರು, ನಾಳೆ ಇನ್ನೊಂದು ಊರಿಗೆ ಹೋಗುತ್ತೇವೆ. ಚೆಂದದ ಮನೆ ಕಟ್ಟಿಸಿಕೊಂಡು ಭೂಪಾಲದಲ್ಲಿ ವಾಸವಿದ್ದ ನಾವು ಬಡತನ, ನಿರುದ್ಯೋಗದಿಂದ ಅಲೆಮಾರಿಗಳು ಆಗಬೇಕಾಯಿತು. ನಮಗೆ ಬೇಕಿರುವುದು ತುತ್ತು ಅನ್ನ, ಧರಿಸಲು ಬಟ್ಟೆ ಮತ್ತು ವಾಸಿಸಲು ಮನೆ. ಒಳ್ಳೆಯ ಬಟ್ಟೆ ಮತ್ತು ಮನೆ ಸಿಗದಿದ್ದರೂ ಚಿಂತೆಯಿಲ್ಲ. ತುತ್ತು ಅನ್ನ ಸಿಕ್ಕರೆ ಸಾಕು, ಜೀನಾ ಇಸಿ ಕಾ ನಾಮ್ ಹೈ… ಎಂಬಂತೆ ನಮ್ಮ ಬದುಕು’ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.
ಇವರ ವಾಸವೂ ಇಲ್ಲೆ ಹಾಗೂ ದುಡಿಮೆಯೂ ಇಲ್ಲೆ.

’ನಮಗೆ ಎಲ್ಲಿ ಅನ್ನ ಸಿಗುವುದೋ ಅದೇ ನಮ್ಮೂರು. ನಾವು 25 ಜನರು. ಒಗ್ಗಟ್ಟಿನಿಂದ ಕಷ್ಟಪಟ್ಟು ದುಡಿಯುತ್ತೇವೆ. ಕಲಿತಿರುವ ಕಸುಬು ನಮ್ಮನ್ನು ಉಪವಾಸ ಹಾಕಲ್ಲ ಎಂಬ ನಂಬಿಕೆಯಿದೆ. ಒಂದು ಕೆಜಿಗೆ ೧೫೦ ರೂಪಾಯಿಯಂತೆ ಕೃಷಿ ಉಪಕರಣಗಳನ್ನು ಮಾಡಿಕೊಡುತ್ತೇವೆ’ ಎಂದು ತುಳಸಿಸಿಂಗ್‌ ಎಂಬುವವರು ತಿಳಿಸಿದರು.
ಕಮ್ಮಾರಿಕೆ ಮೂಲ: ’ಕಮ್ಮಾರಿಕೆ ಮಾಡುತ್ತಿದ್ದವರು ಮೂಲತಃ ವಿಶ್ವಬ್ರಾಹ್ಮಣ ಕುಲದವರಾಗಿದ್ದು ಕರಕುಶಲ ಕಲೆಗಳ ಬೆಳವಣಿಗೆಗೆ ಇವರ ಕೊಡುಗೆ ಅಪಾರವಾದುದು. ನಂತರ ಮುಸಲ್ಮಾನರು ಈ ವೃತ್ತಿಯನ್ನು ಮುಂದುವರೆಸಿದರು. ಅವರು ಇದನ್ನು ಕೊಲಿಮಿ ಅನ್ನುತ್ತಿದ್ದರು. ಹಿಂದೆ ಚಕ್ಕಡಿ ಗಾಡಿಗಳನ್ನು ಬಳಸುತ್ತಿದ್ದರು. ಅದರ ಗಾಲಿಗಾಗಿ ಕಬ್ಬಿಣದ ಅಚ್ಚು ಅತ್ಯಗತ್ಯವಾಗಿತ್ತು. ಚಕ್ಕಡಿ ಬಂಡಿಗೆ ಬೇಕಾದ ಸಾಮಗ್ರಿಗಳಾದ ಗಾಲಿಯ ಅಚ್ಚು, ಗಾಲಿಯ ಗಡ್ಡು ಕಟ್ಟು, ಬಾಯಕಟ್ ಗಾಲಿಗಳನ್ನು ಜೋಡಿಸುವ ಅಚ್ಚು, ರಂಧ್ರಕ್ಕೆ ಬೇಕಾದ ಬಾಯಬಳಿ ಹಾಗೂ ಕಿವಿಬಳಿ ಇವೆಲ್ಲಕ್ಕೂ ರೈತರು ಇವರನ್ನು ಅವಲಂಬಿಸಿದ್ದರು. ಟೈರು ಗಾಡಿಗಳು ಹಾಗೂ ಟ್ರ್ಯಾಕ್ಟರು ಬಂದ ಮೇಲೆ ಈ ವೃತ್ತಿಯವರು ಕ್ರಮೇಣ ನಶಿಸಿದರು’ ಎಂದು ಶಿಡ್ಲಘಟ್ಟದ ಹಿರಿಯರೊಬ್ಬರು ತಿಳಿಸಿದರು.