ಈ ವರ್ಷ ಕೇವಲ ಒಂದು ಎಕರೆಯಷ್ಟು ಪಾಲಿ ಹೌಸ್ ನಿರ್ಮಾಣಕ್ಕೆ ಮಾತ್ರ ಪ್ರೋತ್ಸಾಹ ಧನದ ಅನುದಾನ ಬಂದಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೆಶಕ ಮುನೇಗೌಡ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ಪಾಲಿ ಹೌಸ್ಗಳಿಗೆ ಸಬ್ಸಿಡಿ ವಿತರಣೆಗಾಗಿ ಫಲಾನುಭವಿಗಳ ಆಯ್ಕೆಗಾಗಿ ಲಾಟರಿ ಪ್ರಕ್ರಿಯೆಯನ್ನು ನಡೆಸಿ ಅವರು ಮಾತನಾಡಿದರು.
ಇಬ್ಬರು ರೈತರಿಗೆ ಮಾತ್ರ ತಲಾ ಅರ್ಧ ಎಕರೆಯಂತೆ ಆಯ್ಕೆ ಮಾಡಿದೆ. ಮುಂದಿನ ದಿನಗಳಲ್ಲಿ ಅನುದಾನ ಬಂದಾಗ ಉಳಿದ ರೈತರಿಗೆ ಕ್ರಮ ಸಂಖ್ಯೆ ಆಧಾರದಲ್ಲಿ ಆಧ್ಯತೆ ಮೇರೆಗೆ ಅನುದಾನ ನೀಡಲಾಗುವುದು ಎಂದರು.
ಕೇವಲ ಒಂದು ಎಕರೆಯಷ್ಟು ಪಾಲಿ ಹೌಸ್ಗೆ ಮಾತ್ರವೇ ಅನುದಾನ ಬಿಡುಗಡೆ ಆಗಿದ್ದರಿಂದ ಇಬ್ಬರು ರೈತರನ್ನು ಮಾತ್ರವೇ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಇದರಿಂದಾಗಿ ಲಾಟರಿಗೆ ಆಗಮಿಸಿದ್ದ ಇನ್ನುಳಿದ ೯೭ ಮಂದಿ ರೈತರು ನಿರಾಶೆಯಿಂದ ವಾಪಸ್ಸಾಗುವಂತಾಯಿತು.
೧೧೬ ಮಂದಿ ರೈತರು ಅರ್ಜಿ ಸಲ್ಲಿಸಿದ್ದು ಈ ಪೈಕಿ ೧೭ ಅರ್ಜಿಗಳು ನಾನಾ ಕಾರಣಗಳಿಗೆ ವಜಾ ಗೊಂಡಿದ್ದು ಉಳಿದ ೯೯ ಮಂದಿ ರೈತರ ಅರ್ಜಿಗಳನ್ನು ಲಾಟರಿಗೆ ಹಾಕಲಾಗಿತ್ತು.
ಮುಂದಿನ ವರ್ಷಗಳಲ್ಲಾದರೂ ಪಾಲಿಹೌಸ್ ನಿರ್ಮಾಣಕ್ಕೆ ಹೆಚ್ಚು ಅನುದಾನವನ್ನು ನೀಡುವಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು, ಶಾಸಕರನ್ನು ಒತ್ತಾಯಿಸಿ ಎಂದು ರೈತರು ಮನವಿ ಮಾಡಿ ನಿರಾಶೆಯಿಂದ ಹೊರ ನಡೆದರು.
ಕೃಷಿ ಸಹಾಯಕ ನಿರ್ದೆಶಕ ಮುರಳಿ, ನರೇಗಾ ಸಹಾಯಕ ನಿರ್ದೆಶಕ ಶ್ರೀನಾಥ್ಗೌಡ, ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಗೋಣಿಮರದಹಳ್ಳಿ ಪ್ರಸನ್ನಕುಮಾರ್ ಹಾಜರಿದ್ದರು.