ತಾಲ್ಲೂಕಿನಾದ್ಯಂತ ವಿವಿಧ ದರ್ಗಾಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸುಮಾರು 50 ಲಕ್ಷ ರೂಗಳನ್ನು ಮಂಜೂರು ಮಾಡಿಸಿರುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಹಜರತ್ ಸುಲ್ತಾನ್ ಗಯಬ್ ಷಾ ವಲ್ಲಿ ಬಾಬ ದರ್ಗಾದ ಆರು ಲಕ್ಷ ರೂ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಅಜ್ಜಕದಿರೇನಹಳ್ಳಿಯಿಂದ ಚಿಕ್ಕತೇಕಹಳ್ಳಿ ಮಾರ್ಗವಾಗಿ ಬಶೆಟ್ಟಹಳ್ಳಿವರೆಗೆ ಹಾಗೂ ಸಾದಲಿಯಿಂದ ಪೆರೇಸಂದ್ರ ರಸ್ತೆಯವರೆಗೆ 54 ಲಕ್ಷ ರೂಪಾಯಿಗಳ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ತಾಲ್ಲೂಕಿನಾದ್ಯಂತ 76 ಹಳ್ಳಿಗಳಲ್ಲಿ ಸಿಸಿ ರಸ್ತೆಯ ಗುದ್ದಲಿ ಪೂಜೆ ಮಾಡಲಾಗುತ್ತಿದೆ. ಕೆಲವು ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಗ್ರಾಮಸ್ಥರು ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ರಾಜಣ್ಣ, ಬೆಳ್ಳೂಟಿ ಗೇಟ್ ಬಳಿಯಿರುವ ಹಜರತ್ ಸುಲ್ತಾನ್ ಗಯಬ್ ಷಾ ವಲ್ಲಿ ಬಾಬ ದರ್ಗಾದಲ್ಲಿ ಚಾದರ್ ಹೊದಿಸಿ ಪೂಜೆ ಸಲ್ಲಿಸಿದರು.
ನಗರಸಭಾ ಸದಸ್ಯ ಅಫ್ಸರ್ ಪಾಷ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಂಜುಂಡಪ್ಪ, ಆನೂರು ಶಿವಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.