Home News ದಲಿತಪರ ಸಂಘಟನೆಗಳ ಮುಖಂಡರ ಪ್ರತಿಭಟನೆ

ದಲಿತಪರ ಸಂಘಟನೆಗಳ ಮುಖಂಡರ ಪ್ರತಿಭಟನೆ

0

ತಾಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರನ್ನು ಸಭೆಗೆ ಆಹ್ವಾನಿಸಿ ಮುಖಂಡರೆಲ್ಲಾ ಸಭೆಯಲ್ಲಿ ಪಾಲ್ಗೊಳ್ಳಲು ಬಂದಾಗ ಸಭೆ ಕರೆದಿರುವ ತಹಸೀಲ್ದಾರ್ ಕಚೇರಿಯಲ್ಲಿಲ್ಲದೇ ಮುಖಂಡರನ್ನು ಕಾಯಿಸುವ ಮೂಲಕ ದಲಿತ ಮುಖಂಡರಿಗೆ ಅವಮಾನವೆಸಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಆರೋಪಿಸಿದರು.
ಇದೇ ಮಾರ್ಚ್‌ ೧೦ ರಂದು ದಲಿತ ವಚನಕಾರರ ಜಯಂತಿಯನ್ನು ಆಚರಿಸುವ ಸಲುವಾಗಿ ಬುಧವಾರ ಸಂಜೆ ೪.೩೦ ಕ್ಕೆ ಪೂರ್ವಭಾವಿ ಸಭೆಯನ್ನು ಕರೆದಿದ್ದ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್‌ರೈ ಸಭೆಯ ಸಮಯಕ್ಕೆ ಕಚೇರಿಯಲ್ಲಿಲ್ಲದೇ ಸಭೆಗೆ ಬಂದಿದ್ದ ದಲಿತ ಮುಖಂಡರನ್ನು ಸುಮಾರು ಹೊತ್ತು ಕಾಯಿಸಿದ್ದರಿಂದ ಬೇಸತ್ತ ಮುಖಂಡರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರ ವಿರುದ್ದ ಘೋಷಣೆಗಳನ್ನು ಕೂಗಿದರು.
ತಾಲ್ಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದ ತಹಶೀಲ್ದಾರರು ಕಚೇರಿಯಲ್ಲಿಲ್ಲ. ಇಲ್ಲಿರುವ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ ಸಾಹೇಬರು ಬೇರೆ ಸಭೆಯಲ್ಲಿದ್ದಾರೆ ಬರುವವರೆಗೂ ಕಾಯುವಂತೆ ತಿಳಿಸುತ್ತಾರೆ. ಪೂರ್ವಭಾವಿ ಸಭೆ ಕರೆಯುವಂತೆ ನಾವೇನಾದರೂ ಒತ್ತಾಯ ಮಾಡಿದ್ದೆವಾ. ಅವರೇ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿರುವ ನಮ್ಮನ್ನು ವಿನಾ ಕಾರಣ ಕಾಯಿಸುವ ಮೂಲಕ ದಲಿತರ ಪರ ಅವರಿಗೆ ಎಷ್ಟು ಕಾಳಜಿಯಿದೆ ಎನ್ನುವುದನ್ನು ಪ್ರದರ್ಶಿಸಿದ್ದಾರೆ ಎಂದರು.
ದಲಿತ ವಚನಕಾರರ ಜಯಂತಿಯ ಪೂರ್ವಭಾವಿ ಸಭೆಯನ್ನೇ ಸುಸೂತ್ರವಾಗಿ ನಡೆಸಲಾರದ ತಹಶೀಲ್ದಾರರು ಜಯಂತಿಯನ್ನು ಎಷ್ಟು ಮಾತ್ರ ಆಚರಿಸುತ್ತಾರೆ. ದಲಿತರ ಬಗ್ಗೆ ಇವರಿಗೆ ಎಷ್ಟು ಮಾತ್ರ ಕಾಳಜಿಯಿದೆ ಎಂದ ಪ್ರತಿಭಟನಾಕಾರರು ತಹಶೀಲ್ದಾರರಿಗೆ ದಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಾ ಕೆಲ ಕಾಲ ತಾಲ್ಲೂಕು ಕಚೇರಿಗೆ ಅಡ್ಡಲಾಗಿ ಕುಳಿತು ಪ್ರತಿಭಟಿಸಿದರು.
ದಸಂಸ ತಾಲೂಕು ಸಂಚಾಲಕ ಎನ್.ವೆಂಕಟೇಶ್, ಕದಸಂಸ ಸಂಚಾಲಕ ದಡಂಘಟ್ಟ ತಿರುಮಲೇಶ್, ಅರುಣ್‌ಕುಮಾರ್, ಚಲಪತಿ, ನಾಗನರಸಿಂಹ, ರವಿ, ಕೃಷ್ಣಪ್ಪ, ಮಾದಿಗ ದಂಡೋರ ಅಧ್ಯಕ್ಷ ಗುರುಮೂರ್ತಿ, ಪ್ರಕಾಶ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!