Home News ದಾರ್ಶನಿಕರ ಜಯಂತಿಯ ನೆಪದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ

ದಾರ್ಶನಿಕರ ಜಯಂತಿಯ ನೆಪದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ

0

‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎನ್ನುವ ಮೂಲಕ ಜಾತಿ ಸಂಘರ್ಷಗಳನ್ನು ಹೋಗಲಾಡಿಸಲು ತಮ್ಮ ಕೀರ್ತನೆಗಳಿಂದ ಜಾಗೃತಿ ಮೂಡಿಸಿದ ಭಕ್ತ ಶ್ರೇಷ್ಠರು ಕನಕದಾಸರು ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸಿ.ಬಿ.ಹನುಮಂತಪ್ಪ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಸೋಮವಾರ ಸಂಜೆ ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಮತ್ತು ದಾಸ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಆಚರಿಸಿದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಸಮಾಜದಲ್ಲಿ ನಡೆಯುತ್ತಿರುವ ಮೂಢ ನಂಬಿಕೆ ಕಂದಾಚಾರಗಳನ್ನು ನೂರಾರು ವರ್ಷಗಳ ಹಿಂದೆಯೇ ಮನಗಂಡು ಅವನ್ನು ಹತ್ತಿಕ್ಕಲು ಪ್ರಯತ್ನಿಸಿದ ಕ್ರಾಂತಿಕಾರಿ ಕನಕದಾಸರು. ದಾರ್ಶನಿಕರ ಜಯಂತಿಯ ನೆಪದಲ್ಲಿ ಆತ್ಮಾವಲೋಕನವನ್ನು ಎಲ್ಲರೂ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ದಾಸ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್‌ ಮಾತನಾಡಿ, ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಕನಕದಾಸರ ಚಿಂತನೆಗಳ ಅಗತ್ಯತೆ ಅಂದಿಗಿಂತ ಇಂದು ಹೆಚ್ಚಿದೆ. 16ನೇ ಶತಮಾನದಲ್ಲಿ ಬದುಕಿದ್ದ ಸಂತ ಕವಿ ಕನಕದಾಸರು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದರು. ನೂರಾರು ವರ್ಷಗಳ ನಂತರವೂ ನಾವು ಅವರ ಜಯಂತಿ ಆಚರಿಸುವ ಮೂಲಕ ನೆನಪು ಮಾಡಿಕೊಳ್ಳುತ್ತೇವೆ ಎಂದರೆ ಅವರ ಆಲೋಚನೆಗಳ ಮಹತ್ವ ಎಷ್ಟು ಎಂಬುದು ಗೊತ್ತಾಗುತ್ತದೆ. ಅಸಮಾನತೆ ವಿರುದ್ಧ ಹೋರಾಡಲು ಅವರ ಮಾತುಗಳನ್ನು ಸ್ಫೂರ್ತಿಯಾಗಿ ಪಡೆಯಬೇಕು ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳಾದ ಎಸ್‌.ಮಹಮ್ಮದ್‌ ಬಾಬಾಜಾನ್‌, ಎ.ಇರ್ಫಾನ್‌ಪಾಷ, ಎ.ಶಿವಾಣಿ, ಎನ್‌.ಟಿ.ನಂದನ್‌ಕುಮಾರ್‌ ಕನಕದಾಸರ ಕುರಿತು ಮಾತನಾಡಿದರು. ದಾಸರ ಕೀರ್ತನೆಗಳನ್ನು ಸಂಗೀತ ಶಿಕ್ಷಕರಾದ ಚಂದ್ರಪ್ಪ, ಎಸ್‌.ವಿ.ರಾಮಮೂರ್ತಿ, ನಾಮದೇವ್‌ ಹಾಡಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ದಾಸ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ.ರಾಘವೇಂದ್ರ, ಕೆ.ಪಿ.ನವಮೋಹನ್‌, ಕಾಚಹಳ್ಳಿ ಎಂ.ದೇವರಾಜ್‌, ಶ್ರೀನಿವಾಸರೆಡ್ಡಿ, ಗಜೇಂದ್ರ, ವೇಣುಗೋಪಾಲ್‌, ಚನ್ನಕೃಷ್ಣ, ದೇವರಾಜ್‌, ಶ್ರೀರಾಮಯ್ಯ, ವೆಂಕಟೇಶ್‌, ನರಸಿಂಹಪ್ಪ, ನಾರಾಯಣಮೂರ್ತಿ, ಪ್ರಭಾಕರ್‌ ಮತ್ತಿತರರು ಹಾಜರಿದ್ದರು.