Home News ದೇವರಮಳ್ಳೂರಲ್ಲಿ ಶ್ರೀಮಳ್ಳೂರಾಂಭದೇವಿಗೆ ತಂಬಿಟ್ಟು ದೀಪೋತ್ಸವ

ದೇವರಮಳ್ಳೂರಲ್ಲಿ ಶ್ರೀಮಳ್ಳೂರಾಂಭದೇವಿಗೆ ತಂಬಿಟ್ಟು ದೀಪೋತ್ಸವ

0

ದೇವರಿಗೆ ಮಡಿಲು ತುಂಬಿದ ಊರು, ದೇವರುಗಳ ತವರೂರು ಎಂದು ಹೆಸರಾದ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮೂರು ದಿನಗಳ ಕಾಲ ಅದ್ದೂರಿ, ಸಡಗರ ಸಂಭ್ರಮದಿಂದ ಶ್ರದ್ಧಾ ಭಕ್ತಿಯಿಂದ ಊರ ಜಾತ್ರೆಯನ್ನು ನೆರವೇರಿಸಲಾಯಿತು.
ಜಾತ್ರೆಗಾಗಿ ಇಡೀ ಗ್ರಾಮವನ್ನು ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಎಲ್ಲ ಮನೆಗಳೂ ಬಣ್ಣದಿಂದ ಸಿಂಗಾರಗೊಂಡಿದ್ದವು.
ಗ್ರಾಮದ ಊರ ದೇವತೆ ಮಳ್ಳೂರಾಂಭದೇವಿ ಸೇರಿದಂತೆ ಇತರೆ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಿ ನೈವೇಧ್ಯವನ್ನು ಅರ್ಪಿಸಿ ಜನರು ಭಕ್ತಿಭಾವ ಮೆರೆದರು.
ನಂತರ ಬಂಧು ಬಳಗ ಸ್ನೇಹಿತರು, ಪರಿಚಿತರು, ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರನ್ನು ಕರೆದ ಭರ್ಜರಿ ಬಾಡೂಟ ಹಾಕಿಸಿ ತಾವೂ ಉಂಡು ಸಂತೃಪ್ತಗೊಂಡರು.
ಜಾತ್ರೆಯ ಅಂಗವಾಗಿ ಗ್ರಾಮ ದೇವತೆ ಶ್ರೀಮಳ್ಳೂರಾಂಭ ದೇವಿಯ ಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಸೋಮೇಶ್ವರಸ್ವಾಮಿ, ಮಾರಮ್ಮದೇವಿ, ಗಂಗಮ್ಮದೇವಿ, ನೇರಳೆಮ್ಮದೇವಿ ಹಾಗೂ ಸಪ್ಲಮ್ಮ ದೇವಿ ದೇವಾಲಯಗಳಲ್ಲಿ ಲೋಕ ಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸಿ ಹೋಮ ಹವನ ಇನ್ನಿತರೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಜಾತ್ರೆಯ ೨ನೇ ದಿನ ಇಡೀ ಊರಿನ ಮನೆ ಮನೆಯಿಂದಲೂ ತಂಬಿಟ್ಟು ದೀಪದ ಆರತಿಯನ್ನು ಹೊತ್ತು ಗ್ರಾಮದಲ್ಲಿ ಪ್ರದಕ್ಷಿಣೆ ಹಾಕಿ ಗ್ರಾಮದ ಹೊರವಲಯದಲ್ಲಿನ ಮಳ್ಳೂರಾಂಭ ದೇವಿ ದೇವಾಲಯದಲ್ಲಿ ದೇವತೆಗೆ ಆರತಿಯನ್ನು ಬೆಳಗಲಾಯಿತು.
ಅಂತಿಮ ದಿನವಾದ ಬುಧವಾರ ಕುರಿ ಮೇಕೆ ಕೋಳಿಯನ್ನು ಕಡಿದು ಮಾಂಸದ ವಿವಿದ ಭಕ್ಷ್ಯ ಭೋಜನಗಳನ್ನು ತಯಾರಿಸಿ, ಮನೆಗಳ ಆವರಣದಲ್ಲಿ ಪೆಂಡಾಲ್ ನಿರ್ಮಿಸಿ ಭರ್ಜರಿ ಊಟ ಹಾಕಿದರು.