Home News ದೇವರಮಳ್ಳೂರಿನಲ್ಲಿ ಗಮಕ ಹಾಡುವ ಆಂಜನೇಯನ ಅಪರೂಪದ ವಿಗ್ರಹ

ದೇವರಮಳ್ಳೂರಿನಲ್ಲಿ ಗಮಕ ಹಾಡುವ ಆಂಜನೇಯನ ಅಪರೂಪದ ವಿಗ್ರಹ

0

ರಾಮಾಯಣದ ಪಾತ್ರಗಳಲ್ಲಿ ಜನಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ರಾಮನ ಪರಮಭಕ್ತ ಮತ್ತು ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.
ಸಾಮಾನ್ಯವಾಗಿ ನಿಂತಿರುವ ಹನುಮನ ವಿಗ್ರಹ ಅಥವಾ ಚಿತ್ರವನ್ನೇ ಹನುಮಂತನ ಗುಡಿಗಳಲ್ಲಿ ಕಾಣುತ್ತೇವೆ. ಜಿಲ್ಲೆಯಲ್ಲೇ ಅತ್ಯಂತ ಅಪರೂಪವೆಂಬಂತೆ ಒಂದು ಕೈಲಿ ಚಿಟಿಕೆಯನ್ನು ಹಿಡಿದು ಮತ್ತೊಂದು ಕೈಲಿ ಏಕತಾರಿಯನ್ನು ನುಡಿಸುತ್ತಾ ಕುಳಿತುಕೊಂಡು ಗಮಕವನ್ನು ಹಾಡುವ ಆಂಜನೇಯನ ಮೂರ್ತಿಯು ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿದೆ.
ರಾಮಾಯಣದಲ್ಲಿ ಮಂಗಳ ಶ್ಲೋಕಗಳಿವೆ ಅದರಲ್ಲಿ ಒಂದಾದ –

ಚಿನ್ಮುದ್ರೆಯಲ್ಲಿರುವ ರಾಮ

‘ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಪೇ ; ಮಧ್ಯೇಪುಷ್ಪಕಮಾಸನೇ ಮಣಿಮಯೇ ವಿರಾಸನೇ ಸುಸ್ಥಿತಮ್‌; ಅಗ್ರೇ ವಾಚಯತಿ ಪ್ರಭಂಜನಸುತೇ ತತ್ವಂ ಮುನಿಭ್ಯಃ ಪರಮ್‌; ವ್ಯಾಖ್ಯಾಂತಂ ಭರತಾದಿಭಿಃ ಷರಿವೃತಂ ರಾಮಂ ಭಜೇ ಶ್ಯಾಮಲಮ್‌‘.
ಇದರ ಅರ್ಥ: ‘ಕಲ್ಪವೃಕ್ಷದ ಕೆಳಗೆ ಚಿನ್ನದ ಮಹಾಮಂಟಪವಿದೆ, ಅದರಲ್ಲಿ ಪುಷ್ಪಕ ವಿಮಾನದ ಮಧ್ಯದಲ್ಲಿರುವ ಮಣಿಮಯವಾದ ಸಿಂಹಾಸನದಲ್ಲಿ ವೈದೇಹಿಯೊಂದಿಗೆ ವೀರಾಸನದಲ್ಲಿ ಶ್ರೀರಾಮನು ಕುಳಿತಿದ್ದಾನೆ. ತನ್ನ ಮುಂದೆ ಕುಳಿತು ಆಂಜನೇಯನು ಓದುತ್ತಿರುವ ಪರಾತತ್ವದ ಸಂಗತಿಗಳನ್ನು ರಾಮನು ವ್ಯಾಖ್ಯಾನ ಮಾಡುತ್ತಿರುವನು. ಈ ಸಂದರ್ಭದಲ್ಲಿ ಭರತಾದಿಗಳ ಜೊತೆಗೆ ಇರುವ ರಾಮನನ್ನು ಭಜಿಸುತ್ತೇನೆ’.
ರಾಮಾಯಣ ಮಹಾಕಾವ್ಯದ ಈ ಶ್ಲೋಕದಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ರಾಮ ಮುನಿಗಳಿಗೆ ವ್ಯಾಖ್ಯಾನ ಮಾಡುವುದನ್ನು ತಿಳಿಸಲಾಗಿದೆ. ರಾಮನು ವ್ಯಾಖ್ಯಾನ ನೀಡುವ ಮುನ್ನ ಶ್ಲೋಕಗಳನ್ನು ಗಮಕಿ ಆಂಜನೇಯ ರಾಗವಾಗಿ ವಾಚಿಸುತ್ತಾನೆ.
ಗರ್ಭಗುಡಿಯಲ್ಲಿರುವ ರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯರ ಮೂರ್ತಿಗಳು

‘ಈ ಶ್ಲೋಕವನ್ನು ಪ್ರತಿನಿಧಿಸುವ ಅಪರೂಪದ ಶಿಲ್ಪಗಳು ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಆತ್ಮಾರಾಮ ದೇವಾಲಯದಲ್ಲಿದೆ. ಚೋಳರ ಮತ್ತು ಪಲ್ಲವರ ಕಾಲದ ಈ ಪುರಾತನ ದೇವಾಲಯದ ಗರ್ಭಗುಡಿಯಲ್ಲಿರುವ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮರ ವಿಗ್ರಹಗಳು ಆಧ್ಯಾತ್ಮ ರಾಮಾಯಣದ ಸ್ವರೂಪದಲ್ಲಿದೆ. ವಿಶೇಷವೆಂದರೆ ಈ ರೀತಿಯ ವಿಗ್ರಹಗಳು ಜಿಲ್ಲೆಯಲ್ಲೇ ಎಲ್ಲೂ ಇಲ್ಲ. ಜೀವಾತ್ಮ – ಪರಮಾತ್ಮರ ಬೆಸುಗೆ ಸೂಚಿಸುವ ಚಿನ್ಮುದ್ರೆಯಲ್ಲಿರುವ ರಾಮನ ಅಪರೂಪದ ವಿಗ್ರಹದ ಮುಂದೆ ಒಂದು ಕೈಲಿ ಏಕತಾರಿ ಮತ್ತೊಂದು ಕೈಲಿ ಚಿಟಿಕೆಯನ್ನು ಹಿಡಿದು ಆಂಜನೇಯ ಗಮಕ ಹಾಡುವ ಅಪರೂಪದ ಶಿಲ್ಪಗಳು ಇಲ್ಲಿವೆ. ಈ ರೀತಿಯ ಆತ್ಮಾರಾಮ ಶಿಲ್ಪ ಅನಂತಪುರ ಜಿಲ್ಲೆ ಸಿಂಗಲನಮಲದಲ್ಲಿದ್ದರೂ ತನ್ಮಯನಾಗಿ ಕುಳಿತು ಏಕತಾರಿ ನುಡಿಸುತ್ತಾ ಗಮಕ ಹಾಡುವ ಆಂಜನೇಯನ ಶಿಲ್ಪ ಅಲ್ಲಿಲ್ಲ’ ಎನ್ನುತ್ತಾರೆ ವಿದ್ವಾಂಸ ಬಿ.ಎನ್‌.ಶ್ರೀನಿವಾಸನ್‌.
‘ರಾಮಾಯಣವೆಂದರೆ ಕೇವಲ ರಾಮನ ಕಥೆಯಲ್ಲ. ಅಲ್ಲಿ ಮೌಲ್ಯವಿದೆ, ಆಧ್ಯಾತ್ಮವಿದೆ, ಪ್ರಕೃತಿಯಿದೆ, ಪರಿಸರಪ್ರೇಮ, ಜೀವನ ಪ್ರೀತಿ, ಆತ್ಮ ಪರಮಾತ್ಮನ ಅನುಸಂಧಾನ ಮುಂತಾದ ಅತ್ಯಗತ್ಯವಾದ ಸೂಕ್ಷ್ಮ ವಿಚಾರಗಳಿವೆ. ರಾಮನನ್ನು ಪೂಜಿಸುವ ನಾವೆಲ್ಲ ಈ ಬಗ್ಗೆಯೂ ತಿಳಿಯಬೇಕು. ನಮ್ಮಲ್ಲಿರುವ ಅಪರೂಪದ ಶಿಲ್ಪಗಳ ಬಗ್ಗೆಯೂ ಗೌರವಾದರ ಹೊಂದಿರಬೇಕು’ ಎಂದು ಅವರು ಹೇಳಿದರು.