Home News ದೇವರ ದಾಸಿಮಯ್ಯನವರ ಸಾಮಾಜಿಕ ಚಿಂತನೆ ಇಂದಿಗೂ ಪ್ರಸ್ತುತವಾದದ್ದು

ದೇವರ ದಾಸಿಮಯ್ಯನವರ ಸಾಮಾಜಿಕ ಚಿಂತನೆ ಇಂದಿಗೂ ಪ್ರಸ್ತುತವಾದದ್ದು

0

ವಚನಕಾರರ ಯುಗದಲ್ಲಿ ಸಮಾನತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವು ಸಾಹಿತ್ಯಗಳನ್ನು ರಚಿಸಿ ಜಾತಿ ಪದ್ಧತಿ ನಿವಾರಣೆಗೆ ಯತ್ನಿಸಿದ್ದ ದೇವರ ದಾಸಿಮಯ್ಯನವರ ಸಾಮಾಜಿಕ ಚಿಂತನೆ ಇಂದಿಗೂ ಪ್ರಸ್ತುತವಾದದ್ದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಮಿನಿವಿಧಾನಸೌಧ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಆದ್ಯ ವಚನಕಾರ, ನೇಕಾರ ಸಂತ ವಿಶ್ವಮಾನ್ಯ ಶರಣಶ್ರೀ ದೇವರದಾಸಿಮಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ದಾಸಿಮಯ್ಯನವರು ತಮ್ಮ ನೇಕಾರಿಕೆ ಕಾಯಕ ಜೊತೆಗೆ ವಚನ ಸಾಹಿತ್ಯ ರಚಿಸುವ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದರು. ಅಂಥವರ ಸಾಮಾಜಿಕ ಕಳಕಳಿ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ನೇಕಾರರ ಸಂಘದವರು ಸಭಾಂಗಣಕ್ಕೆ ಸ್ಥಳವನ್ನು ಕೋರಿದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮಾತನಾಡಿ, ಮಹಾನ್ ವ್ಯಕ್ತಿಗಳ ಆಚರಣೆಗಳು ಕೇವಲ ಸಾಂಪ್ರದಾಯಿಕವಾಗಿರದೇ ಅವರ ತತ್ವ ಆದರ್ಶ ಮತ್ತು ಜೀವನ ಶೈಲಿಗಳನ್ನು ಅಳವಡಿಸಿಕೊಂಡು ಪಾಲಿಸುವ ಜೊತೆಗೆ ಇತರರಿಗೂ ಅಳವಡಿಸಿಕೊಳ್ಳುವಲ್ಲಿ ನೆರವಾದರೆ ಮಾತ್ರ ಆಚರಣೆಗಳಿಗೊಂದು ಅರ್ಥ ಬರುತ್ತದೆ ಎಂದು ಹೇಳಿದರು.
ನೇಕಾರ ವೃತ್ತಿ ಹೊಂದಿರುವ ದೇವಾಂಗ ಸಮಾಜ ಬಾಂಧವರಲ್ಲಿ ದಾಸಿಮಯ್ಯನವರ ಕುರಿತಂತೆ ಜಾಗೃತಿ ಮೂಡಿಸಬೇಕು. ಬಸವಣ್ಣನವರಿಗಿಂತಲೂ ಹಿಂದೆಯೇ ನೇಕಾರ ವೃತ್ತಿಯ ಜೊತೆಯಲ್ಲಿ ವಚನಗಳನ್ನು ಬರೆಯುವ ಮೂಲಕ ವೃತ್ತಿಯಲ್ಲಿ ಭಕ್ತಿಯ ಪ್ರಾಮುಖ್ಯತೆ ತೋರಿಸಿಕೊಟ್ಟ ಮಹಾನ್ ಚೈತನ್ಯವನ್ನು ರಾಜ್ಯಾದ್ಯಂತ ನೆನಪು ಮಾಡಿಕೊಳ್ಳಲು ಸಿಕ್ಕ ಅವಕಾಶದಲ್ಲಿ ಅವರ ವಚನಗಳನ್ನು ಎಲ್ಲರಿಗೂ ತಿಳಿಸಬೇಕು ಎಂದು ನುಡಿದರು.
ನಿವೃತ್ತ ಪ್ರಾಂಶುಪಾಲ ಮೊಹಮ್ಮದ್‌ ಖಾಸಿಂ ವಚನ ಬ್ರಹ್ಮ ದೇವರ ದಾಸಿಮಯ್ಯನವರ ಕುರಿತು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್‌.ನರಸಿಂಹಯ್ಯ, ವಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಜೆ.ಗಣೇಶ್, ಸುಬ್ರಮಣಿ ಮತ್ತಿತರರು ಹಾಜರಿದ್ದರು.