Home News ದೇವೇಗೌಡರ ಭಾವಚಿತ್ರವಿಟ್ಟುಕೊಂಡು ಜನರ ಬಳಿ ಹೋಗುವೆ – ಬಿ.ಎನ್.ರವಿಕುಮಾರ್

ದೇವೇಗೌಡರ ಭಾವಚಿತ್ರವಿಟ್ಟುಕೊಂಡು ಜನರ ಬಳಿ ಹೋಗುವೆ – ಬಿ.ಎನ್.ರವಿಕುಮಾರ್

0

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುವುದಕ್ಕಾಗಿ ಅಪಾರವಾಗಿ ಶ್ರಮಿಸಿದ್ದೇನೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ತಾದೂರು ಗ್ರಾಮದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಳೆದ ಸೋಮವಾರ ಶಿಡ್ಲಘಟ್ಟದಲ್ಲಿ ನಡೆದಿರುವ ವಿಕಾಸಪರ್ವ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಬಗ್ಗೆ ತುಂಬಾ ಹಗುರವಾಗಿ ಮಾತನಾಡಿ, ದೇವೇಗೌಡರ ಫೋಟೊ ಇಟ್ಟುಕೊಂಡು ಬರುವವರನ್ನು ನಂಬಬೇಡಿ ಎಂದು ಹೇಳಿದ್ದಾರೆ.
ನಾವು ದೇವೇಗೌಡರ ಅನುಮತಿ ಪಡೆದು ಅವರ ಫೋಟೊ ಹಾಕಿದ್ದೇವೆ. ಹಾಲಿ ಶಾಸಕ ಎಂ.ರಾಜಣ್ಣ, ಮಾಜಿ ಶಾಸಕ ವಿ.ಮುನಿಯಪ್ಪ ಇಬ್ಬರ ಹೊಂದಾಣಿಕೆಯಾಗಿದೆ. ವಿಕಾಸಪರ್ವ ಸಮಾವೇಶಕ್ಕೆ ವಿ.ಮುನಿಯಪ್ಪ ಜನರನ್ನು ಕಳುಹಿಸಿ, ಹಣಕೊಟ್ಟಿದ್ದಾರೆ. ಸೋಲುವ ಭಯದಿಂದ ವಿ.ಮುನಿಯಪ್ಪ, ಶಾಸಕ ಎಂ.ರಾಜಣ್ಣ ಅವರಿಗೆ ಟಿಕೆಟ್ ಸಿಗುವಂತೆ ನೋಡಿಕೊಂಡಿದ್ದಾರೆ. ಆದ್ದರಿಂದ ನಾವು ಸ್ಪರ್ಧೆ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಎಂ.ರಾಜಣ್ಣ ಅವರನ್ನು ಸೋಲಿಸಲು. ಒಂದು ವೇಳೆ ದೇವೇಗೌಡರು ನೀವು ಚುನಾವಣೆಯಿಂದ ಹಿಂದೆ ಸರಿಯಿರಿ ಎಂದು ಹೇಳಿದರೆ, ಖಂಡಿತ ಸ್ಪರ್ಧಿಸುವುದಿಲ್ಲ.
ಕ್ಷೇತ್ರದಲ್ಲಿ ಶಾಸಕರಾದಾಗಿನಿಂದ ಮಾಡಿರುವ ಭ್ರಷ್ಟಚಾರದ ಹಣದಲ್ಲಿ ಚುನಾವಣೆ ಮಾಡಲಿಕ್ಕೆ ಹೊರಟಿದ್ದಾರೆ. ಕಳೆದ ಚುನಾವಣೆಯಲ್ಲಿ ಜನರೇ ಹಣ ಕೊಟ್ಟು ಎಂ.ರಾಜಣ್ಣ ಅವರನ್ನು ಗೆಲ್ಲಿಸಿದರು. ಈ ಬಾರಿ ಎಲ್ಲಿಂದ ಇಷ್ಟೊಂದು ಹಣ ಅವರಿಗೆ ಬಂದಿದೆ ಎಂದು ಪ್ರಶ್ನಿಸಿದ ಅವರು, ನಾವು ದೇವೇಗೌಡರ ಭಾವಚಿತ್ರವನ್ನು ಇಟ್ಟುಕೊಂಡೇ ಚುನಾವಣೆಗೆ ಹೋಗ್ತೇವೆ, ನಾವು ಮೊದಲಿನಿಂದಲೂ ಜೆಡಿಎಸ್‌, ಗೆದ್ದರೂ ನಾವು ಜೆಡಿಎಸ್ ಹೊರತು ಬೇರೆಯಲ್ಲ.
ಕುಮಾರಸ್ವಾಮಿ ಸಮಾವೇಶಕ್ಕೆ ಕ್ಷೇತ್ರದ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಬಂದಿದ್ದು ಶೇಕಡಾ 10 ರಷ್ಟು. ಮಾಲೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ಚಿಂತಾಮಣಿ ಸೇರಿದಂತೆ ಹಲವಾರು ಕಡೆಗಳಿಂದ ಜನರು ಬಂದಿದ್ದರೇ ಹೊರತು, ನಿಜವಾದ ಕಾರ್ಯಕರ್ತರು ನಮ್ಮಲ್ಲಿದ್ದಾರೆ ಎಂದರು.
ಟ್ರಸ್ಟ್‌ ಹೆಸರಿನಲ್ಲಿ ಯಾರಿಗೂ ನಾನು ಆಮಿಷ ಒಡ್ಡಿಲ್ಲ. ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು. ಆಗ ಬಡವರ, ದೀನದಲಿತರ, ದುರ್ಬಲರ ಏಳಿಗೆ ಆಗುತ್ತದೆ ಎಂಬ ಉದ್ದೇಶದಿಂದ ಅವರ ಜನ್ಮ ದಿನದ ಪ್ರಯುಕ್ತ ಸಾಮಾಜಿಕ ಕಾರ್ಯಗಳನ್ನು ನಡೆಸಿರುವೆ. ಈಗಲೂ ಅದೇ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ಕಾಂಗ್ರೆಸ್‌ನೊಂದಿಗೆ ಶಾಮೀಲಾದ ರಾಜಣ್ಣನನ್ನು ಸೋಲಿಸಿ ಜೆಡಿಎಸ್‌ ಪಕ್ಷವನ್ನು ಪುನಃ ಗಟ್ಟಿಗೊಳಿಸುತ್ತೇನೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ನಾನು ಶಾಸಕ ರಾಜಣ್ಣ ಅವರನ್ನು ಬೆಂಬಲಿಸುತ್ತೇನೆ ಎನ್ನುವ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಬಿ.ಎನ್.ರವಿಕುಮಾರ್ ಅವರನ್ನು ಶಾಸಕರನ್ನಾಗಿ ಮಾಡಬೇಕೆಂದು ಸಾಮೂಹಿಕವಾಗಿ ಸಂಘಟನೆ ಮಾಡುತ್ತಿದ್ದಾರೆ. ಯಾವ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು ಎಂದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಪಿ.ವಿ.ನಾಗರಾಜ್, ಕದಿರಿಯೂಸುಫ್‌, ದೊಣ್ಣಹಳ್ಳಿ ರಾಮಣ್ಣ, ಕೇಶವಮೂರ್ತಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ಮಳ್ಳೂರು ಮುನಿಯಪ್ಪ, ತಿಮ್ಮನಾಯಕನಹಳ್ಳಿ ರಮೇಶ್, ಬಚ್ಚನಹಳ್ಳಿ ನಾರಾಯಣಸ್ವಾಮಿ, ಚೀಮನಹಳ್ಳಿ ಗೋಪಾಲ್, ಜೆ.ಎಂ.ವೆಂಕಟೇಶ್, ಚಿಲಕಲನೇರ್ಪು ಹೋಬಳಿ ಮುಖಂಡರು ಹಾಜರಿದ್ದರು.
ಕೆ.ಎಚ್‌. ಮುನಿಯಪ್ಪ ವಿ.ಮುನಿಯಪ್ಪ ಅವರಂತೆ ಕಾಂಗ್ರೆಸ್‌ಗೆ ದ್ರೋಹ ಬಗೆಯುವುದಿಲ್ಲ
ಕೆ.ಎಚ್.ಮುನಿಯಪ್ಪ ಅವರ ಬೆಂಬಲ ನಿಮಗೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿಕುಮಾರ್ ಅವರು, ದೇವೇಗೌಡರು, ಜೆಡಿಎಸ್ ಪಕ್ಷಕ್ಕೆ ಎಷ್ಟು ನಿಷ್ಟರೋ ಕೆ.ಎಚ್.ಮುನಿಯಪ್ಪ ಅವರು, ಕಾಂಗ್ರೆಸ್‌ಗೆ ಅಷ್ಟೇ ನಿಷ್ಟರು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರು ವಿ.ಮುನಿಯಪ್ಪ. ಎಂ.ಎಲ್.ಸಿ.ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರ ವಿರುದ್ಧವಾಗಿ ಸದಸ್ಯರಿಂದ ಮತದಾನ ಮಾಡಿಸಿದ್ದರು. ಶಾಸಕ ಎಂ.ರಾಜಣ್ಣ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷ ವಿರೋಧವಾಗಿ ಮತಚಲಾಯಿಸಿದ್ದರು. ಕೆ.ಎಚ್.ಮುನಿಯಪ್ಪ ಅವರು, ನಮಗೆ ಬೆಂಬಲ ನೀಡುವುದಾಗಿ ಎಲ್ಲಿಯೂ ಹೇಳಿಲ್ಲ. ಅದು ಸುಳ್ಳು ಎಂದರು.