ಯುಗಾದಿಯಾದ ಒಂಬತ್ತನೇ ದಿನ ಆಚರಿಸುವ ರೈತರ ಹಬ್ಬವಾದ ಪೈರುಹಬ್ಬವನ್ನು ಸೋಮವಾರ ಪಟ್ಟಣದ ದೇಶದಪೇಟೆಯಲ್ಲಿರುವ ಶೆಟ್ಟಪ್ಪನವರ ಎಸ್.ರವಿ ಅವರ ಮನೆಯಲ್ಲಿ ಆಚರಿಸಲಾಯಿತು.
ಯುಗಾದಿಯ ದಿನ ದೇವಾಲಯದಲ್ಲಿ ಬೇವು, ಬೆಲ್ಲ ಹಂಚಿ ಬಂದು ಮನೆಯಲ್ಲಿ ಅವರೆ, ಜೋಳ, ರಾಗಿ, ಹುರುಳಿ, ಹಲಸಂದಿ ಇತ್ಯಾದಿ ಧಾನ್ಯಗಳನ್ನು ಮಣ್ಣು ಮತ್ತು ಗೊಬ್ಬರದಲ್ಲಿ ಬೆರೆಸಿ ಇಡುತ್ತಾರೆ. ಜೊತೆಯಲ್ಲಿ ನೇಗಿಲನ್ನು ಇಟ್ಟು ಪೂಜಿಸಲಾಗುತ್ತದೆ. ರೈತರಿಗೆ ನೇಗಿಲು ಪೂಜನೀಯವಾದುದು. ಒಂಬತ್ತು ದಿನಗಳು ಪೂಜಿಸಿದ ಪೈರನ್ನು ಒಂಬತ್ತನೇ ದಿವಸ ಶ್ರೀರಾಮನವಮಿಯಂದು ತಮ್ಮ ಜಮೀನಿನಲ್ಲಿ ನೀರು ಹರಿಯುವೆಡೆ ಬಿಡುತ್ತಾರೆ. ನಂತರ ಈ ನೇಗಿಲಿನಿಂದ ಉಳುತ್ತಾರೆ.