Home News ದೇಶದ ಪ್ರಗತಿಗೆ ಮೂಲ ಶಿಕ್ಷಣ

ದೇಶದ ಪ್ರಗತಿಗೆ ಮೂಲ ಶಿಕ್ಷಣ

0

ಸ್ವಾತಂತ್ರ್ಯಾನಂತರ ಶಿಕ್ಷಣದಿಂದ ಕಾನೂನು ಅರಿವು ಉಂಟಾಗಿದ್ದು ಈಗ ಹಲವಾರು ಸೌಲಭ್ಯಗಳು ದೊರಕುವಂತಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಗತಿಗೆ ಮೂಲ ಶಿಕ್ಷಣ. ಪ್ರತಿಯೊಬ್ಬರೂ ಶಿಕ್ಷಿತರಾದಾಗ ಮಾತ್ರ ತಿಳುವಳಿಕೆ, ಸಾಮಾಜಿಕ ಕಳಕಳಿ, ದೇಶದ ಬಗ್ಗೆ ಗೌರವ, ಅಭಿಮಾನ, ಪರಿಸರ ಪ್ರೇಮ ಮೂಡುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳ ಪ್ರಾಮುಖ್ಯತೆಯನ್ನು ಸಂದರ್ಭಸಹಿತವಾಗಿ ವಿವರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಎಚ್‌.ವಿ.ವೆಂಕಟರೆಡ್ಡಿ ಮಾತನಾಡಿ, ‘ಕಾನೂನು, ಜಗಳ, ರಾಜಿ ಮುಂತಾದ ಸಂಗತಿಗಳು ಶಾಲಾ ಹಂತದಿಂದಲೇ ಪ್ರಾರಂಭವಾಗುತ್ತವೆ. ಶಾಲಾ ಹಂತದಲ್ಲೇ ಮಕ್ಕಳ ಮಾನಸಿಕ ಪರಿವರ್ತನೆ ಸಕಾರಾತ್ಮಕವಾಗಿ ರೂಪಿಸುವುದರಿಂದ ಮುಂದೆ ಜೀವನದಲ್ಲಿ ಅವರು ಉತ್ತಮರಾಗಲು ಸಾಧ್ಯ’ ಎಂದು ನುಡಿದರು. ವಕೀಲೆ ನೌತಾಜ್‌ ಮಹಿಳಾ ಮತ್ತು ಮಕ್ಕಳ ಕಳ್ಳಸಾಗಾಣಿಕೆ ಕುರಿತು ಮಾತನಾಡಿದರೆ, ವಕೀಲ ಸಿ.ಭಾಸ್ಕರ್‌ ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಮಾತನಾಡಿದರು. ಸರ್ಕಾರಿ ವಕೀಲೆ ಎಸ್‌.ಕುಮುದಿನಿ, ಶಿಕ್ಷಕರಾದ ನಾಗಭೂಷಣ್‌, ರಾಮಕೃಷ್ಣ, ಗಂಗಶಿವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.