Home News ದೇಶಪ್ರೇಮ ಸಾರುವ ದೊಡ್ಡದಾಸೇನಹಳ್ಳಿಯ ಹಸಿರು ಶಾಲೆ

ದೇಶಪ್ರೇಮ ಸಾರುವ ದೊಡ್ಡದಾಸೇನಹಳ್ಳಿಯ ಹಸಿರು ಶಾಲೆ

0

‘ದೇಶದ ಹಿರಿಮೆಯನ್ನು ಪ್ರತಿಬಿಂಬಿಸುವಂತೆ ಮತ್ತು ದೇಶಪ್ರೇಮ ಮೂಡಿಸಲು ಇಲ್ಲಿ ಮಕ್ಕಳು ಭಾರತ ಮಾತೆಯ ಮಡಿಲಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪರಿಸರವನ್ನು ನಿರ್ಮಿಸಲಾಗಿದೆ. ಮಕ್ಕಳ ಪರಿಸರ ಪ್ರಜ್ಞೆ, ಶಿಕ್ಷಕರ ಮತ್ತು ಗ್ರಾಮಸ್ಥರ ಸಹಕಾರ ಇಲ್ಲಿ ಕಂಡು ಬಂದಿದೆ. ರೈತರ ಬಂಧು ಎಂದು ಕರೆಯಲ್ಪಡುವ ಎರೆಹುಳುಗಳಿಂದ ಗೊಬ್ಬರ ತಯಾರಿಸಿ ಗಿಡಗಳಿಗೆ ಉಪಯೋಗಿಸುತ್ತಿದ್ದಾರೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ, ಶಿಸ್ತು ಎದ್ದು ಕಾಣುತ್ತದೆ. ವಿಶಾಲವಾದ ಶಾಲಾ ಆವರಣದಲ್ಲಿ ಪ್ರತಿಯೊಂದು ಮಗುವೂ ಗಿಡಗಳ ಪೋಷಣೆಯನ್ನು ಮಾಡುತ್ತಿದ್ದಾರೆ’ ಎಂದು ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ಪರಿಸರ ಮಿತ್ರ ‘ಹಳದಿ ಶಾಲೆ ಪ್ರಶಸ್ತಿ’ ನೀಡಿರುವ ಸಂದರ್ಭದಲ್ಲಿ ಹೊರತಂದ ಕಿರುಹೊತ್ತಿಗೆಯಲ್ಲಿ ವಿವರಿಸಿದ್ದಾರೆ.
1958ರಲ್ಲಿ ಪ್ರಾರಂಭವಾದ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗ ಒಂದರಿಂದ ಐದರವರೆಗೆ ವ್ಯಾಸಂಗ ಮಾಡುತ್ತಿರುವ 20 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕ ಕೆ.ಎನ್‌.ಶ್ರೀಕಾಂತ್‌ ಹನ್ನೊಂದು ವರ್ಷಗಳಿಂದ ಇಲ್ಲಿದ್ದರೆ, ಶಿಕ್ಷಕ ಎ.ಆರ್‌.ಮಹೇಶ್‌ ಎರಡು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ತೊಡಗಿರವ ಮಕ್ಕಳು ಮತ್ತು ಶಿಕ್ಷಕರು

ಶಿಕ್ಷಕರ ಮತ್ತು ಗ್ರಾಮಸ್ಥರ ಪರಿಸರ ಕಾಳಜಿಯಿಂದ ಈ ಶಾಲೆಯ ಒಂದು ಎಕರೆ ಆವರಣದಲ್ಲಿ ನೇರಳೆ, ವಿವಿಧ ರೀತಿಯ ಮಾವು, ಗಸಗಸೆ, ಹಲಸು, ಹೊಂಗೆ, ಅಶೋಕ, ಸಿಲ್ವರ್‌, ಬೇವು, ಸಂಪಿಗೆ, ನೆಲ್ಲಿ, ನಾನಾ ರೀತಿಯ ಹೂಗಿಡಗಳು ನಳನಳಿಸುತ್ತಿವೆ. ಬೇಸಿಗೆಯ ನೀರಿನ ಅಭಾವವಿದ್ದರೂ ಹಣ ತೆತ್ತು ತಿಂಗಳಿಗೆ ಮೂರು ಟ್ಯಾಂಕರ್‌ ನೀರನ್ನು ತಂದು ಗಿಡಗಳಿಗೆ ಉಣಿಸುತ್ತಿದ್ದಾರೆ. ಮಣ್ಣು ಪರೀಕ್ಷೆಯನ್ನು ಮಾಡಿಸಿ ಅಗತ್ಯ ಪೌಷ್ಠಿಕಾಂಶಗಳನ್ನು ನೀಡುವ ಇವರು ಬಿಸಿಯೂಟಕ್ಕೆ ಬೇಕಾದ ತರಕಾರಿಯನ್ನು ಬೆಳೆದುಕೊಳ್ಳುತ್ತಾರೆ.
ಎರೆಹುಳುಗಳನ್ನು ತಂದು ಗಿಡಗಳ ಉದುರಿದ ಎಲೆಗಳು, ಸಗಣಿ ಮುಂತಾದವುಗಳನ್ನು ಹಾಕಿ ಉತ್ತಮ ಎರೆಹುಳು ಗೊಬ್ಬರವನ್ನು ತಯಾರಿಸುವ ಇವರು ಶಾಲಾ ಆವರಣದ ಗಿಡಗಳಿಗೆ ಈ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಈಗ ನಮ್ಮಲ್ಲಿ ಹುಡುಕಿದರೆ ಸುಮಾರು ಐದು ಮಕ್ಕರಿಯಷ್ಟು ಎರೆಹುಳುಗಳೇ ಸಿಗುತ್ತವೆ ಎನ್ನುವ ಶಿಕ್ಷಕ ಶ್ರೀಕಾಂತ್‌, ರೈತ ಮಕ್ಕಳು ಇವನ್ನೆಲ್ಲಾ ಬಹು ಬೇಗ ಕಲಿಯುತ್ತಾರೆ. ಅವರಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ವ್ಯತ್ಯಾಸ ತಿಳಿಸಿಕೊಡಬೇಕಷ್ಟೆ ಎನ್ನುತ್ತಾರೆ.
‘ನಮ್ಮ ಶಾಲೆಯ ಮಕ್ಕಳಿಗೆ ಅವಿರತ ಟ್ರಸ್ಟ್‌ನವರು ಪ್ರತಿ ವರ್ಷ ನೋಟ್‌ ಪುಸ್ತಕಗಳನ್ನು ಕೊಡುತ್ತಾರೆ. ಈ ಬಾರಿ ಒಂದು ಕಂಪ್ಯೂಟರ್‌ ಕೊಟ್ಟಿದ್ದಾರೆ. ನನ್ನ ಪ್ರೌಢಶಾಲೆಯ ಗೆಳೆಯರು ಉನ್ನತ ಹುದ್ದೆಗಳಲ್ಲಿದ್ದು, ಅವರು ನಮ್ಮ ಶಾಲೆಗೆ ಒಂದು ಕಂಪ್ಯೂಟರ್‌ ಮತ್ತು ನೀರು ಶುದ್ಧೀಕರಣ ಯಂತ್ರವನ್ನು ಕೊಟ್ಟಿದ್ದಾರೆ. ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಹಳೆ ವಿದ್ಯಾರ್ಥಿಗಳು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಸಾಕಷ್ಟು ಆರ್ಥಕವಾಗಿ ನೆರವಾಗುತ್ತಾರೆ. ಶಾಲಾಭಿವೃದ್ಧಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಎಲ್ಲರಿಗೂ ಶಾಲೆಯ ಬಗ್ಗೆ ತುಂಬಾ ಕಾಳಜಿಯಿದೆ. ಮಕ್ಕಳ ಸಂಖ್ಯೆ ಹೆಚ್ಚು ಮಾಡಲು ನಾವೂ ಶ್ರಮಿಸುತ್ತಿದ್ದೇವೆ. ಪರಿಸರ ಮಿತ್ರ ‘ಹಳದಿ ಶಾಲೆ ಪ್ರಶಸ್ತಿ’ ನಮ್ಮ ಶಾಲೆಗೆ ನೀಡಿರುವುದು ನಮಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದಂತಿದೆ’ ಎಂದು ಅವರು ಹೇಳಿದರು.