ಛತ್ರಪತಿ ಶಿವಾಜಿ ಮತ್ತು ಸಂತ ಕವಿ ಸರ್ವಜ್ಞ ಇಬ್ಬರಲ್ಲೂ ಇರುವ ಸಾಮ್ಯತೆ ದೇಶಭಕ್ತಿ, ಮಾನವೀಯ ಮೌಲ್ಯಗಳು ಹಾಗೂ ನಿಸ್ವಾರ್ಥ ಬದುಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಛತ್ರಪತಿ ಶಿವಾಜಿ ಹಾಗೂ ಸಂತಕವಿ ಸರ್ವಜ್ಞ ಅವರುಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿವಾಜಿಯು ಅಪ್ರತಿಮ ದೇಶಭಕ್ತರಾಗಿದ್ದು ಅವರ ಧೈರ್ಯ, ಸಾಹಸಕ್ಕೆ ಪ್ರತೀಕವಾದ ಜೀವನ ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ. ಸಹನೆ, ಸಹಿಷ್ಣುತೆ ಮತ್ತು ಜಾತ್ಯಾತೀತೆಯ ಅವರ ಮನೋಭಾವದಿಂದ ಆಗಿನ ಕಾಲದ ಭರತ ಖಂಡದಲ್ಲಿ ಶಿವಾಜಿ ಪ್ರಸಿದ್ದರಾಗಿದ್ದು, ಅದೆಷ್ಟೊ ಮಂದಿ ರಾಜರು ಇವರ ಆಡಳಿತ ಕಾರ್ಯವೈಖರಿಯನ್ನು ಅನುಸರಿಸಿದ್ದರು. ಅಷ್ಟರ ಮಟ್ಟಿಗೆ ಶಿವಾಜಿಯವರು ರಾಜತಾಂತ್ರಿಕರಾಗಿದ್ದರು ಎಂದರು.
ತನ್ನ ಸಾಮ್ರಾಜ್ಯ ವಿಸ್ತರಣೆ, ಪರಿಣಾಮಕಾರಿ ದೂರದೃಷ್ಟಿಯ ನಾಯಕತ್ವ ಗುಣಗಳಿಂದಾಗಿ ಶಿವಾಜಿ ಮಹರಾಜರು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಸಾಮ್ರಾಟರೆಂದು ಪ್ರಸಿದ್ದಿ ಪಡೆದು ಕೀರ್ತಿಗೆ ಪಾತ್ರರಾಗಿದ್ದರು ಎಂದು ಶಿವಾಜಿಯ ಗುಣಗಾನ ಮಾಡಿದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ ವಿಜಾತಿ ಎನಬೇಡ ಶಿವನೊಲಿದಾತನೆ ಜಾತ ಸರ್ವಜ್ಞ’, ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ.
ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮತ್ತು ಸಂತ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ ರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತ ಕೃಷ್ಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಗುರುರಾಜ್ರಾವ್, ಮರಾಠಿ ಜನಾಂಗದ ಪ್ರಸಾದ್, ವೆಂಕಟೇಶ್, ಶೇಖರ್, ಕೃಷ್ಣ, ಪಂಡುರಾಂಗರಾವ್ ಮತ್ತಿತರರು ಹಾಜರಿದ್ದರು.