ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2018 – 19 ನೇ ಸಾಲಿನ ಜಿಲ್ಲಾ ಹಂತದ “ಪರಿಸರ ಮಿತ್ರ” ಹಸಿರು ಶಾಲೆ ಪ್ರಶಸ್ತಿಯನ್ನು ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀಡಿದೆ. ಪ್ರಶಸ್ತಿ ಪಾರಿತೋಷಕದ ಜೊತೆಯಲ್ಲಿ ಐದು ಸಾವಿರ ರೂಗಳ ಚೆಕ್ ಸಹ ನೀಡಲಾಗಿದೆ.
28 ವಿದ್ಯಾರ್ಥಿಗಳು ಮತ್ತು ಶಿಕ್ಷಕರಾದ ಕೆ.ಎನ್.ಶ್ರೀಕಾಂತ್ ಹಾಗೂ ಎ.ಆರ್.ಮಹೇಶ್ ಶಾಲೆಯ ಆವರಣದ ಒಂದೂವರೆ ಎಕರೆ ಸ್ಥಳವನ್ನು ಹಸಿರುತಾಣವನ್ನಾಗಿಸಿದ್ದಾರೆ. ಶಾಲೆಯ ಮುಂದಿನ ತೋಟದಲ್ಲಿ ಸೀತಾಫಲ, ನೇರಳೆ, ಬಾಳೆಗಿಡಗಳು ಸೇರಿದಂತೆ ಸುಮಾರು 550 ಕ್ಕೂ ಹೆಚ್ಚು ಗಿಡಗಳಿವೆ. ಶಾಲೆಯ ಬಿಸಿಯೂಟಕ್ಕೆ ಬೇಕಾದ ಕುಂಬಳಕಾಯಿ, ಕರಿಬೇವು, ಕೊತ್ತಂಬರಿ ಮತ್ತು ಸೊಪ್ಪುಗಳನ್ನು ಬೆಳೆದುಕೊಳ್ಳುತ್ತಾರೆ. ಇವರಲ್ಲಿ ಔಷಧಿ ವನವಿದೆ, ತುಳಸು ವನವಿದೆ ಮತ್ತು ಗುಲಾಬಿ ವನವೂ ಇದೆ.
ನೀರಿಗಾಗಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯವರು ಇವರ ಹಸಿರು ಪ್ರೀತಿಯನ್ನು ಕಂಡು ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹನಿ ನೀರೂ ವ್ಯರ್ಥವಾಗದಂತೆ ತಟ್ಟೆ ತೊಳೆದ, ಕೊಠಡಿ ತೊಳೆದ ನೀರೂ ಗಿಡಗಳೆಡೆಗೆ ಹರಿಯುವಂತೆ ಮಾಡಿಕೊಂಡಿದ್ದಾರೆ. ಮಕ್ಕಳ ಹುಟ್ಟುಹಬ್ಬದಂತೆ ಚಾಕೋಲೇಟ್ ತರಬೇಡಿ, ಒಂದು ಗಿಡ ನೆಡಿ ಎಂದು ಹೇಳಿ ಅದನ್ನು ರೂಢಿಸಿರುವುದರಿಂದ ಮಕ್ಕಳಿಗೆ ಇದು ನನ್ನ ಗಿಡ ಎಂಬ ಆತ್ಮೀಯತೆ ಮೂಡಿದೆ.
“ಶಾಲೆಯ ವಿದ್ಯಾರ್ಥಿಗಳೆಲ್ಲರೂ ನಮ್ಮಲ್ಲಿನ ಗಿಡಗಳನ್ನು ಸಲೀಸಾಗಿ ಗುರುತಿಸಬಲ್ಲರು. ಹಕ್ಕಿ, ಚಿಟ್ಟೆ, ಕೀಟಗಳ ಬಗ್ಗೆ ಮಕ್ಕಳು ತಿಳಿಯುವುದಲ್ಲದೆ, ಪರಿಸರ ಕಾಪಾಡುವ ಮನಸ್ಥಿತಿ ಅವರಲ್ಲಿ ಅಂತರ್ಗತವಾಗಿದೆ. ಇಲ್ಲಿ ಬಿಡುವ ಸೀತಾಫಲ, ಬಾಳೆ, ನೇರಳೆ, ಸೊಪ್ಪು ಎಲ್ಲವೂ ಮಕ್ಕಳಿಗೇ ಮೀಸಲು. ನಾವೇ ತಯಾರಿಸುವ ಎಳೆಹುಳು ಗೊಬ್ಬರವನ್ನು ಗಿಡಗಳಿಗೆ ಹಾಕುತ್ತೇವೆ. ದಾನಿಗಳು ನಮಗೆ ನೆರವು ನೀಡುತ್ತಿರುವುದರಿಂದ ಸಹಕಾರಿಯಾಗಿದೆ. ಈ ದಿನ ನಮ್ಮ ಶಾಲೆಗೆ “ಪರಿಸರ ಮಿತ್ರ” ಹಸಿರು ಶಾಲೆ ಪ್ರಶಸ್ತಿ ನೀಡಿದ್ದು ನಮಗೆ, ಮಕ್ಕಳಿಗೆ ಇನ್ನಷ್ಟು ಉತ್ಸಾಹ ಮೂಡಿಸಿದೆ” ಎಂದು ಶಿಕ್ಷಕ ಕೆ.ಎನ್.ಶ್ರೀಕಾಂತ್ ತಿಳಿಸಿದರು.
- Advertisement -
- Advertisement -
- Advertisement -