Home News ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿರುವುದು ದೌರ್ಭಾಗ್ಯದ ಸಂಗತಿ – ಗುಲಾಂ ನಬಿ ಆಜಾದ್

ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿರುವುದು ದೌರ್ಭಾಗ್ಯದ ಸಂಗತಿ – ಗುಲಾಂ ನಬಿ ಆಜಾದ್

0

ಹಿಂದು ಮುಸ್ಲಿಂ ನಡುವೆ ಕಂದಕವನ್ನು ಸೃಷ್ಟಿಸಿ ಮಾಡುವ ರಾಜಕಾರಣ ಸರ್ವನಾಶಕ್ಕೆ ಕಾರಣವಾಗುತ್ತದೆ. ಈ ರೀತಿ ರಾಜಕೀಯಕ್ಕೆ ಗುರಿಯಾಗಿ ಇಂದು ಉತ್ತರ ಭಾರತದ ರಾಜ್ಯಗಳು ಹಿಂದುಳಿದಿವೆ. ಕರ್ನಾಟಕದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದರು.
ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
ಮತ ಕೇಳುವವರಲ್ಲಿ ನೀವು ಎರಡೇ ಪ್ರಶ್ನೆಗಳನ್ನು ಕೇಳಬೇಕು. ನೀನು ನಮಗೆ ಏನು ಮಾಡುತ್ತೀಯ? ಮತ್ತು ನಿನಗೆ ಅವಕಾಶ ಸಿಕ್ಕಿದ್ದಾಗ ಏನು ಮಾಡಿದೆ? ಧರ್ಮದ ನಡುವೆ, ಧರ್ಮಗಳ ನಡುವೆ ಒಡೆದು ರಾಜಕಾರಣ ಮಾಡುವವರನ್ನು ದೂರವಿಡಿ.
ಕೇಂದ್ರದಲ್ಲಿ ಕೆ.ಎಚ್‌.ಮುನಿಯಪ್ಪ ರಾಜ್ಯದಲ್ಲಿ ವಿ.ಮುನಿಯಪ್ಪ ಇದ್ದರೆ ನಿಮ್ಮ ಕ್ಷೇತ್ರ ಸುಭಿಕ್ಷವಾಗಿರುತ್ತದೆ. ಮುನಿ ಎಂದರೆ ಸಾತ್ವಿಕರು, ತಪೋನಿರತರು, ಮಾನವತ್ವದ ಪ್ರತಿರೂಪ. ಅಂಥಹವರ ಆಯ್ಕೆ ನಿಮ್ಮದಾಗಲಿ. ಸರ್ವಧರ್ಮ ಸಮನ್ವಯದ, ಹಿಂದುಳಿದವರ ಏಳಿಗೆಯ ಸರ್ಕಾರವಿದ್ದರೆ ಅದು ಕಾಂಗ್ರೆಸ್‌ ಸರ್ಕಾರ ಮಾತ್ರ.
ನರೇಂದ್ರ ಮೋದಿ ಕೇವಲ ಭಾಷಣದಿಂದ ಮರುಳು ಮಾಡುತ್ತಾರೆ. ಸುಳ್ಳು ಹೇಳುತ್ತಾರೆ. ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇವೆಂದು ಸುಳ್ಳು ಹೇಳಿದ್ದರು. ವಿದೇಶದಿಂದ ಸಾವಿರಾರು ಕೋಟಿ ಕಪ್ಪು ಹಣ ತಂದು ಬಡವರ ಖಾತೆಗೆ ತಲಾ ಹದಿನೈದು ಲಕ್ಷ ರೂಗನ್ನು ಹಾಕುವುದಾಗಿ ಸುಳ್ಳು ಹೇಳಿದ್ದರು. ಬದಲಿಗೆ ಇನ್ನೊಬ್ಬ ಮೋದಿ ಸಾವಿರಾರು ಕೋಟಿ ಬಡವರ ಹಣ ದೋಚುವಂತೆ ಮಾಡಿದ್ದಾರೆ. ಬೇಟಿ ಬಜಾವೋ ಎಂಬುದು ಕೇವಲ ಘೋಷಣೆಯಷ್ಟೇ. ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಪಾತಕಿಗಳಿಗೆ ಬಿಜೆಪಿ ಸರ್ಕಾರ ರಕ್ಷಣೆ ನೀಡುತ್ತಿದೆ. ವಿದೇಶದಲ್ಲಿಯೇ ಹೆಚ್ಚು ಸಮಯ ಕಳೆಯುವ ನರೇಂದ್ರ ಮೋದಿಯವರು ದೇಶಕ್ಕೆ ಬರುವುದು ಚುನಾವಣಾ ಭಾಷಣ ಮಾಡಲು ಮಾತ್ರ ಎಂದು ಹೇಳಿದರು.
ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಮಾತನಾಡಿ, ವಿ.ಮುನಿಯಪ್ಪ ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಮುಂದೆ ಬರುವ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಾಗುತ್ತಾರೆ. ನಿಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ರಿಯಲ್‌ ಎಸ್ಟೇಟ್‌ನಲ್ಲಿ ಹಣ ಸಂಪಾದಿಸಿರುವವರ ಮಂಕುಬೂದಿಗೆ ಮರುಳಾಗಬೇಡಿ ಎಂದರು.
ಕೆ.ಎಚ್‌.ಮುನಿಯಪ್ಪ ಮಾತನಾಡಿ, ಸಿದ್ಧರಾಮಯ್ಯನವರು ನುಡಿದಂತೆ ನಡೆದಿದ್ದಾರೆ. ತಾವು ನೀಡಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾರೆ. ಜನರಿಗೆ ಕಾಂಗ್ರೆಸ್‌ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್‌ ಭವನಕ್ಕೆ ಬರುವ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಗಾರ್ಡನ್‌ ರಸ್ತೆಯ ಪುರಾತನ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಪೂಜೆ ಸಲ್ಲಿಸಿದರು.
ಕಾಂಗ್ರೆಸ್‌ ವೀಕ್ಷಕರಾದ ಕಾರ್ತಿಕ್‌, ಶ್ರೀಧರ್‌ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇಶವರೆಡ್ಡಿ, ಗುಡಿಯಪ್ಪ, ಆರ್‌.ಶ್ರೀನಿವಾಸ್‌ ಹಾಜರಿದ್ದರು.