Home News ನಗರದಲ್ಲಿ ಕಸ ತುಂಬಿ ತುಳುಕುತ್ತಿದೆ

ನಗರದಲ್ಲಿ ಕಸ ತುಂಬಿ ತುಳುಕುತ್ತಿದೆ

0

ಒಂದೆಡೆ ಸಂಬಳ ನೀಡಿಲ್ಲವೆಂದು ಕೆಲಸ ನಿಲ್ಲಿಸಿರುವ ಪೌರಕಾರ್ಮಿಕರು, ಮತ್ತೊಂದೆಡೆ ಕಸ ತುಂಬಿ ತುಳುಕುತ್ತಿರುವ ನಗರದ ವಿವಿಧ ವಾರ್ಡುಗಳು. ಒಟ್ಟಾರೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತಾಗಿದೆ ನಗರದಲ್ಲಿನ ನಾಗರಿಕರ ಪರಿಸ್ಥಿತಿ.
ನಗರಸಭೆಯ ವ್ಯಾಪ್ತಿಯ ೨೭ ವಾರ್ಡುಗಳಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಲು ನೀಡಲಾಗಿದ್ದ ಟೆಂಡರ್ ಜನವರಿ ೨೦೧೭ ಕ್ಕೆ ಮುಕ್ತಾಯವಾಗಿದೆ. ಇದುವರೆಗೂ ಪುನಃ ಟೆಂಡರ್ ಕರೆದಿಲ್ಲ, ನಗರಸಭೆಯಲ್ಲಿ ಅಧಿಕೃತವಾಗಿರುವ ಸುಮಾರು 40 ಮಂದಿ ಪೌರಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಉಳಿದ ಹೊರಗುತ್ತಿಗೆದಾರರಾಗಿರುವ 50 ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರು ಕೆಲಸ ಮಾಡುತ್ತಿಲ್ಲ, ನಗರಾಭಿವೃದ್ಧಿ ಕೋಶದಿಂದ ಅನುಮತಿ ಪಡೆದುಕೊಂಡು ಇದುವರೆಗೂ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನೇ ಪುನಃ ಮುಂದುವರೆಸಿಕೊಂಡು ಕೆಲಸ ಮಾಡಿಸಲು ಪ್ರಯತ್ನಿಸಲಾಗುತ್ತಿದೆ. ನಗರಸಭೆಯಿಂದ ನೇರವಾಗಿ ಪೌರಕಾರ್ಮಿಕರ ಖಾತೆಗಳಿಗೆ ಸಂಬಳ ನೀಡುವಂತಿಲ್ಲ. ಗುತ್ತಿಗೆದಾರರೇ ನೀಡಬೇಕಿದೆ. ಈ ಕಾರಣದಿಂದಾಗಿ ಕೆಲಸ ನಿಲ್ಲಿಸಿರುವ ಪೌರಕಾರ್ಮಿಕರು ಒಂದೆಡೆ ಸಂಬಳವಿಲ್ಲದೆ ಕಷ್ಟಪಡುತ್ತಿದ್ದರೆ, ಮತ್ತೊಂದೆಡೆ ನಗರ ಕಸ ತ್ಯಾಜ್ಯಗಳಿಂದ ಹಾಳಾಗುತ್ತಿದೆ.
ನಗರದ ಮುಖ್ಯ ರಸ್ತೆಯಾದ ಟಿ.ಬಿ ರಸ್ತೆಯ ಹತ್ತಿರ ಹಾಗೂ ನಗರಸಭೆ ಕಚೇರಿ ಆಸುಪಾಸಿನಲ್ಲಿರುವ 5, 6, 7 ಮತ್ತು 8 ನೇ ವಾರ್ಡಿನಲ್ಲಿ ಕಸದ ರಾಶಿಯು ರಸ್ತೆ ಪಕ್ಕದಲ್ಲಿ ಬಿದ್ದಿವೆ. ಚರಂಡಿಗಳಲ್ಲಿ ಕಲುಷಿತ ನೀರು ತುಂಬಿಹೋಗಿದೆ. ಆರನೇ ವಾರ್ಡಿನಲ್ಲಿ ಒಳಚರಂಡಿಯ ಚೇಂಬರ್‌ ತುಂಬಿ ಹೊರಕ್ಕೆ ಹರಿಯುತ್ತಿದೆ. ತ್ಯಾಜ್ಯ ನೀರು ಹೊರ ಚೆಲ್ಲುತ್ತಿರುವುದರಿಂದ ದುರ್ವಾಸನೆ ಹರಡಿದ್ದು ಈ ಭಾಗದಲ್ಲಿ ವಾಸಿಸುವ ಜನರು ವಾಸನೆಗೆ ಮನೆಯಲ್ಲಿ ಊಟ ಮಾಡಲು ಆಗದಂತಾಗಿದೆ ಎಂದು ದೂರುತ್ತಿದ್ದಾರೆ.
ನಗರಸಭೆಯ ಮುಂಭಾಗದ ಎಸ್‌ಬಿಎಂ ಬ್ಯಾಂಕಿನ ಮುಂದೆ ಕಸದ ರಾಶಿಯು ಬಿದ್ದಿದ್ದರೂ ಇದನ್ನು ತೆಗೆಸುವ ಕಾರ್ಯ ಆಗಿಲ್ಲ. ನಗರಸಭೆಯ ಬಳಿಯೇ ಈ ಪರಿಸ್ಥಿತಿ ಇದ್ದರೆ ಇನ್ನು ನಗರದ ವಿವಿಧ ಭಾಗದಲ್ಲಿನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ತ್ಯಾಜ್ಯ ನಿರ್ವಹಣೆಗಾಗಿ ನಗರಸಭೆಯಿಂದ ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ. ಸ್ವಚ್ಚ ಭಾರತ್‌ ಯೋಜನೆ, ಒಣ ತ್ಯಾಜ್ಯ, ಹಸಿ ತ್ಯಾಜ್ಯ ಬೇರ್ಪಡಿಸುವ ಯೋಜನೆ, ಮನೆಮನೆಗೆ ಬಂದು ಕಸ ಸಂಗ್ರಹಿಸಲು ವಾಹನಗಳು, ಕಸದ ಕಂಟೈನರ್‌ಗಳು, ತ್ಯಾಜ್ಯ ವಿಲೇವಾರಿ ಘಟಕ ಮುಂತಾದ ಯೋಜನೆಗಳಿಗೆ ಲಕ್ಷಾಂತರ ರೂಗಳನ್ನು ವ್ಯಯಿಸಲಾಗುತ್ತಿದ್ದರೂ ನಗರದಲ್ಲಿ ಸ್ವಚ್ಚತೆ ಮಾತ್ರ ಆಗುತ್ತಿಲ್ಲ.
ಮಳೆಗಾಲ ಪ್ರಾರಂಭವಾಗುತ್ತಿದೆ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿರುವುದು ಮಳೆ ಬಂದಾಗ ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳೂ ಹರಡಲು ಪ್ರಾರಂಭವಾಗುತ್ತದೆ. ಈ ಬಗ್ಗೆ ತಕ್ಷಣ ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನ ಬಿಡುಗಡೆ ಮಾಡುತ್ತಿದೆ. ರಾಜ್ಯ ಸರ್ಕಾರವು, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಲು ನಗರೋತ್ಥಾನ ಯೋಜನೆಯು ಸೇರಿದಂತೆ ಅನೇಕ ಯೋಜನೆಗಳ ಮೂಲಕ ಅನುದಾನಗಳು ಬಿಡುಗಡೆ ಮಾಡುತ್ತಿದ್ದರೂ ನಗರದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಸ್ವಚ್ಚತೆಯ ವಿಚಾರದಲ್ಲಿ ಇಲ್ಲಿನ ವ್ಯವಸ್ಥೆ ಮಾತ್ರ ಮೇಲ್ದರ್ಜೆಗೇರದೆ ಇರುವುದು ಇಲ್ಲಿನ ಜನರ ಬೇಸರಕ್ಕೆ ಕಾರಣವಾಗಿದೆ.