ನಗರದ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಬೆರಸದೇ ಎಲ್ಲರೂ ಪಕ್ಷಾತೀತವಾಗಿ ಸಹಕರಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವೇಶ ದ್ವಾರದಲ್ಲಿರುವ ಗೌಡನಕೆರೆಯಿಂದ ಅಮ್ಮನಕೆರೆಗೆ ಸಂಪರ್ಕ ಕಲ್ಪಿಸುವ ಕೋಡಿ ಕಾಲುವೆಯ ಆಧುನೀಕರಣ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ಸುಮಾರು ೭೫ ಲಕ್ಷ ರೂಗಳ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೇರವೇರಿಸಿ ಅವರು ಮಾತನಾಡಿದರು.
ನಗರದ ಪ್ರವೇಶದ್ವಾರದಲ್ಲಿರುವ ಕಾಲುವೆಯಲ್ಲಿ ಕಸ ಕಡ್ಡಿ ತುಂಬಿ ನಗರದ ಅಂದ ಕೆಡಿಸುವ ಜೊತೆಗೆ ದುರ್ನಾತ ಬೀರುತ್ತಿದ್ದು ಈ ಬಗ್ಗೆ ನಗರದ ಜನತೆ ಹಿಂದಿನಿಂದಲೂ ಸುಸಜ್ಜಿತ ಸಿಮೆಂಟ್ ಕಾಲುವೆ ನಿರ್ಮಿಸಲು ಬೇಡಿಕೆಯಿಡುತ್ತಿದ್ದ ಹಿನ್ನಲೆಯಲ್ಲಿ ಇದೀಗ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಇನ್ನು ಸಂತೆ ಮೈದಾನದ ಹಿಂಭಾಗದಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಿಸುವುದು ಸೇರಿದಂತೆ ನಗರದ ಹೊರವಲಯದಲ್ಲಿ ಕೆ ಎಸ್ ಆರ್ ಟಿ ಸಿ ಡಿಪೋ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ರೇಷ್ಮೆ ಹಾಗೂ ಹೈನುಗಾರಿಕೆಯಲ್ಲಿ ಪ್ರಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದಲ್ಲಿ ನೈರ್ಮಲ್ಯ ಕಾಪಾಡಲು ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ.ಕಿಷನ್, ಸದಸ್ಯರಾದ ಲಕ್ಷ್ಮಯ್ಯ, ಜಬೀ, ವೆಂಕಟಸ್ವಾಮಿ, ಮುಖಂಡರಾದ ಮುಗಿಲಡಿಪಿ ನಂಜಪ್ಪ, ಕೆ.ಎಸ್.ಕನಕಪ್ರಸಾದ್, ರೆಹಮತ್ತುಲ್ಲಾ, ಶ್ರೀದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.