Home News ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಬಾಯಿಯ ಆರೋಗ್ಯ ದಿನಾಚರಣೆ

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಬಾಯಿಯ ಆರೋಗ್ಯ ದಿನಾಚರಣೆ

0

ಜಾಗತಿಕ ಮಟ್ಟದಲ್ಲಿ ಬಾಯಿಯ ಹಾಗೂ ಹಲ್ಲಿನ ಅನಾರೋಗ್ಯದ ತೊಂದರೆಗಳು ಮುಂಚೂಣಿಯಲ್ಲಿವೆ. ಸರಿಯಾದ ಸಮಯದಲ್ಲಿ ಸರಿಯಾದ ಗಮನ ಕೊಟ್ಟರೆ ಇವುಗಳನ್ನು ತಡೆಯಬಹುದು. ವಿಶ್ವ ಬಾಯಿಯ ಆರೋಗ್ಯ ದಿನದಂದು ಬಾಯಿ ಮತ್ತು ಹಲ್ಲಿನ ತಜ್ಞರಿಗೆ ಸಮುದಾಯದ ಸೇವೆ ಮಾಡಲು ಮತ್ತು ಸಾಮಾನ್ಯ ಜನರಿಗೆ ಬಾಯಿಯ ಆರೋಗ್ಯದ ಕುರಿತಾಗಿ ಮಾಹಿತಿ ನೀಡಲು ಸದವಕಾಶವಾಗಿದೆ ಎಂದು ಗಂತವೈದ್ಯೆ ಡಾ.ಪ್ರತಿಭಾ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಬಾಯಿಯ ಆರೋಗ್ಯ ದಿನದ ಪ್ರಯುಕ್ತ ಉಚಿತ ದಂತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಬಾಯಿಯ ಆರೋಗ್ಯ ದೇಹಾರೋಗ್ಯದ ಕನ್ನಡಿ ಎಂದು ಹೇಳಲಾಗುತ್ತದೆ. ಹಲವು ರೋಗ ಲಕ್ಷಣಗಳು ಬಾಯಿಯಲ್ಲಿ ಮೊದಲಿಗೆ ಕಾಣಿಸಬಹುದು. ಅದಲ್ಲದೇ ಬಾಯಿಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಕೂಡ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತಿ ಮುಖ್ಯ. ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದ ರೋಗದಿಂದ ಬಳಲುವವರು ತಮ್ಮ ಬಾಯಿಯ ಹಾಗೂ ಹಲ್ಲಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡದಿದ್ದಲ್ಲಿ ಉಲ್ಬಣಗೊಳ್ಳಬಹುದು. ಗರ್ಭಿಣಿಯರ ಬಾಯಿಯ ಆರೋಗ್ಯದಲ್ಲಿ ಕೂಡ ಏರುಪೇರಾಗಬಹುದು. ಹೀಗೆ ಬಾಯಿಯ ಆರೋಗ್ಯವನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷಿಸಿದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ವಿವರಿಸಿದರು.
ಬಾಯಿ ಮತ್ತು ಹಲ್ಲಿನ ಆರೊಗ್ಯ ಪ್ರತಿಯೊಬ್ಬನಿಗೂ ಮುಖ್ಯ. ಸುಂದರ ಹಾಗೂ ಅನಂದದ ನಗು ಪ್ರತಿಯೊಬ್ಬನ ಆಸ್ತಿ. ಇಂದೇ ಬಾಯಿಯ ಆರೋಗ್ಯದ ಕಾಳಜಿವಹಿಸುತ್ತೇನೆಂದು ಪ್ರತಿಜ್ಞೆ ಕೈಗೊಂಡು, ನಿಮ್ಮ ದಂತ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಕ್ರೆಸೆಂಟ್‌ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆಯನ್ನು ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತವಾಗಿ ಪೇಸ್ಟು ಮತ್ತು ಬ್ರಶ್‌ ವಿತರಿಸಲಾಯಿತು.
ಡಾ.ತಿಮ್ಮೇಗೌಡ, ಡಾ.ಶೀಲಾ, ವಸಂತಕುಮಾರಿ, ಕ್ರೆಸೆಂಟ್‌ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್‌ ಅನ್ಸಾರಿ, ಯೂನಿಟಿ ಸಿಲ್‌ಸಿಲಾ ಅಧ್ಯಕ್ಷ ಅಸದ್‌, ಶಬೀನಾ ಸುಲ್ತಾನ್‌, ವೀಣಾ, ಗುರುರಾಜರಾವ್‌ ಹಾಜರಿದ್ದರು.

error: Content is protected !!