Home News ನಗರವನ್ನು ಪ್ಲಾಸ್ಟಿಕ್ ಮತ್ತು ತಂಬಾಕು ಮುಕ್ತ ಮಾಡಲು ವರ್ತಕರು ಮತ್ತು ನಾಗರಿಕರು ಸಹಕರಿಸಿ

ನಗರವನ್ನು ಪ್ಲಾಸ್ಟಿಕ್ ಮತ್ತು ತಂಬಾಕು ಮುಕ್ತ ಮಾಡಲು ವರ್ತಕರು ಮತ್ತು ನಾಗರಿಕರು ಸಹಕರಿಸಿ

0

ರೇಷ್ಮೆ ನಗರ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಗರವನ್ನು ಪ್ಲಾಸ್ಟಿಕ್ ಮತ್ತು ತಂಬಾಕು ಮುಕ್ತ ಹಾಗು ಸ್ವಚ್ಚ ನಗರವನ್ನಾಗಿಸಲು ಅಧಿಕಾರಿಗಳೊಂದಿಗೆ ವರ್ತಕರು ಮತ್ತು ನಾಗರಿಕರು ಸಹಕಾರ ನೀಡುವಂತೆ ತಹಸೀಲ್ದಾರ್ ಎಸ್.ಅಜಿತ್‌ಕುಮಾರ್‌ರೈ ಮನವಿ ಮಾಡಿದರು.
ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಓಗಳು ಮತ್ತು ತಾಲ್ಲೂಕು ವರ್ತಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಪ್ಲಾಸ್ಟಿಕ್ ಹಾಗು ತಂಬಾಕು ನಿಷೇಧ ಮಾಡಲಾಗಿದ್ದರೂ ನಗರದಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಪ್ಲಾಸ್ಟಿಕ್ ಮಾರಾಟ ಮತ್ತು ತಂಬಾಕು ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ತಾಲ್ಲೂಕನ್ನು ಪ್ಲಾಸ್ಟಿಕ್ ಹಾಗು ತಂಬಾಕು ಮುಕ್ತ ನಗರವನ್ನಾಗಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ತಾಲ್ಲೂಕಿನಾಧ್ಯಂತ ಬರಗಾಲ ಆವರಿಸಿದ್ದು ಇರುವ ಮರಗಿಡಗಳ ಸಂರಕ್ಷಣೆ ಮಾಡುವ ಜೊತೆಗೆ ಮನೆಗೊಂದು ಸಸಿ ನೆಡಲು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯ್ತಿ ಪಿಡಿಓಗಳು ಮಾಡಬೇಕು.
ನಗರದ ಸೌಂದರ್ಯ ಕಾಪಾಡಲು ಈಗಾಗಲೇ ತಾಲ್ಲೂಕು ಆಡಳಿತ ಬಿಗಿ ಕ್ರಮಗಳನ್ನು ಕೈಗೊಂಡಿದ್ದು ನಗರದ ಶಾಲಾ ಕಾಲೇಜುಗಳಿಂದ ನೂರು ಯಾರ್ಡ್ ಒಳಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಉಳಿದಂತೆ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು ತಂಬಾಕು ವಸ್ತುಗಳ ಚಿಲ್ಲರೆ ಮಾರಾಟಗಾರರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಧೂಮಪಾನ ಮಾಡದಂತೆ ಸಾರ್ವಜನಿಕ ಪ್ರಕಟಣೆ ಪ್ರದರ್ಶಿಸಬೇಕು.
ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ವರ್ತಕರು ಹೆಚ್ಚಿನ ಸಹಕಾರ ನೀಡಬೇಕು. ಕಡ್ಡಾಯವಾಗಿ ನಮ್ಮ ಅಂಗಡಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂಬ ಪ್ರತಿಜ್ಞೆ ನೀವೇ ಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಅಧಿಕಾರಿಗಳು ಭೇಟಿ ನೀಡಿದಾಗ ಯಾವುದೇ ನಾಮಫಲಕ ಅಳವಡಿಸದೇ ಇರುವುದು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ಹಾಗಾಗಿ ವ್ಯಾಪಾರಸ್ಥರು ಸೇರಿದಂತೆ ನಾಗರಿಕರು ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ನಗರದ ಸ್ವಚ್ಚತೆ ಕಾಪಾಡಲು ನಾಗರಿಕರ ಮನವೊಲಿಸುವ ಕೆಲಸ ಹಾಗು ಅದಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ಜರುಗಿಸಲು ನಗರಸಭೆ ಸಿಬ್ಬಂದಿ ಹಾಗು ಅಧಿಕಾರಿಗಳು ಮುಂದಾಗಬೇಕು ಎಂದರು.
ತಾಲ್ಲೂಕಿನಾಧ್ಯಂತ ಇರುವ ಕೆರೆಗಳಲ್ಲಿ ಜಾಲಿ ಮರಗಳು ಬೆಳೆದಿದ್ದು ಗ್ರಾಮ ಪಂಚಾಯ್ತಿ ಸಹಕಾರದಿಂದ ಕೆರೆಗಳಲ್ಲಿರುವ ಜಾಲಿ ಮರಗಳನ್ನು ತೆರವುಗೊಳಿಸಿ ಬರುವ ಹಣವನ್ನು ಸರ್ಕಾರದ ಖಾತೆಗೆ ತುಂಬುವಂತೆ ಪಿಡಿಓಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇಓ ವೆಂಕಟೇಶ್, ನಗರಸಭೆ ಆಯುಕ್ತ ಎಚ್.ಎ.ಹರೀಶ್, ವರ್ತಕರ ಸಂಘದ ಪ್ರಸಾದ್, ನಾಗರಾಜ್, ಮಲ್ಲಿಕಾರ್ಜುನ್, ನಗರಸಭೆಯ ಆಂಜಿನಪ್ಪ, ದಿಲೀಪ್, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಪಿಡಿಓ ಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.