Home News ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಸದ ಗಲಾಟೆ: ಪೌರ ಕಾರ್ಮಿಕರ ವೇತನ ಬಾಕಿ ಪಾವತಿಗೆ ಪಟ್ಟು: ಅಧಿಕಾರಿಗಳ...

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಸದ ಗಲಾಟೆ: ಪೌರ ಕಾರ್ಮಿಕರ ವೇತನ ಬಾಕಿ ಪಾವತಿಗೆ ಪಟ್ಟು: ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದ ಸದಸ್ಯರು

0

ನಗರಸಭೆಯಲ್ಲಿ ಸೋಮವಾರ ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕರ ಬಾಕಿ ವೇತನ ಹಾಗೂ ಕಸ ವಿಲೇವಾರಿ ವಿಚಾರವು ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಯಿತು. ಮೂರ್ನಾಲ್ಕು ತಿಂಗಳಿಂದಲೂ ವೇತನ ಬಾಕಿ ಇದ್ದು ಪೌರ ಕಾರ್ಮಿಕರು ಕಸ ತೆಗೆಯುತ್ತಿಲ್ಲ. ವಾರ್ಡುಗಳಲ್ಲಿ ಕಸದ ರಾಶಿ ಬಿದ್ದಿದೆ. ನೀವು ಕಸ ತೆಗೆಯಿರಿ ಎಂದು ಅಧಿಕಾರಿಗಳ ವಿರುದ್ದ ಸದಸ್ಯರು ತಿರುಗಿ ಬಿದ್ದರು.
‘ಪೌರಕಾರ್ಮಿಕರಿಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಸಂಬಳ ನೀಡಿಲ್ಲ. ಇದರಿಂದ ಅವರು ಕಸ ಕಡ್ಡಿ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ನಗರದ ಹಾದಿ ಬೀದಿಗಳಲ್ಲಿ ಕಸ ಕಡ್ಡಿಗಳ ರಾಶಿ ಬಿದ್ದಿದೆ. ನಾಗರಿಕರಿಂದ ನಾವು ನಿಂದನೆ ಕೇಳಬೇಕಾಗಿದೆ. ನೀವು ಪೌರ ಕಾರ್ಮಿಕರಿಗೆ ಸಂಬಳ ಕೊಟ್ಟು ಕೆಲಸ ಮಾಡಿಸುವುದಾದರೆ ಮಾಡಿಸಿ ಇಲ್ಲಾ ಅಂದ್ರೆ ನೀವೇ ಬಂದು ನಮ್ಮ ವಾರ್ಡುಗಳಲ್ಲಿ ಕಸ ಕಡ್ಡಿ ತೆಗೆಯಿರಿ’ ಎಂದು ಆಯುಕ್ತ ಹರೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡು ನಮ್ಮ ವಾರ್ಡುಗಳಲ್ಲಿ ಕ್ಲೀನ್ ಆದರೆ ಸಾಕು ಎಂದರು.
ಪ್ರತಿ ಸಭೆಯಲ್ಲೂ ಕಸ ಕಡ್ಡಿ ವಿಲೇವಾರಿಯದ್ದು ಚರ್ಚಿಸಲಾಗುತ್ತಿದ್ದರೂ ಪರಿಹಾರ ಮಾತ್ರ ಸಿಗುತ್ತಿಲ್ಲ. ಬರೀ ಭರವಸೆಗಳಷ್ಟೆ ಸಿಗುತ್ತಿವೆ. ನಾವು ನಮ್ಮ ವಾರ್ಡಿನ ಜನರಿಗೆ ಹೇಳಿ ಹೇಳಿ ಸಾಕಾಗಿದೆ. ಹಾಗಾಗಿ ಇದಕ್ಕೆ ಈ ಸಭೆಯಲ್ಲೆ ಪರಿಹಾರ ಸಿಗಬೇಕೆಂದು ಪಟ್ಟು ಹಿಡಿದರು.
ಪೌರಕಾರ್ಮಿಕರ ಬಾಕಿ ವೇತನಕ್ಕೆ ನೀಡುವ ಬಗ್ಗೆ ಇದೆ ಸಭೆಯಲ್ಲಿ ಇತ್ಯರ್ಥ ಆಗಬೇಕು. ಇಲ್ಲವಾದಲ್ಲಿ ಮುಂದಿನ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹಠಕ್ಕೆ ಬಿದ್ದರು.
ನಂತರ ಅಧ್ಯಕ್ಷರು ಈ ಸಭೆ ಮುಗಿದಾದ ಮೇಲೆ ಪೌರಕಾರ್ಮಿಕರ ಗುತ್ತಿಗೆದಾರರನ್ನು ಕರೆಸಿ ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿ ಚರ್ಚೆಗೆ ಅಂತ್ಯ ಹಾಡಿದರು.