Home News ನಗರಸಭೆ ಚುನಾವಣೆ ಘೋಷಣೆ – ಟಿಕೆಟ್‌ಗಾಗಿ ನಾಯಕರ ಮೊರೆ ಹೋರಾಟ ಆಕಾಂಕ್ಷಿಗಳು

ನಗರಸಭೆ ಚುನಾವಣೆ ಘೋಷಣೆ – ಟಿಕೆಟ್‌ಗಾಗಿ ನಾಯಕರ ಮೊರೆ ಹೋರಾಟ ಆಕಾಂಕ್ಷಿಗಳು

0

ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಶುಕ್ರವಾರ ಬೆಳಗ್ಗೆಯೇ ಆಕಾಂಕ್ಷಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮನೆ ಕಡೆ ಮುಖ ಮಾಡಿ ತಮಗೆ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಅಲೆಯಿಂದ ಬಿಜೆಪಿ ಅಭ್ಯರ್ಥಿಯ ಪರ ಒಂದಷ್ಟು ಮತಗಳು ಬಿದ್ದಿರುವ ಹಿನ್ನಲೆಯಲ್ಲಿ ಬಿಜೆಪಿಯಿಂದ ನಗರಸಭೆಗೆ ಸ್ಫರ್ದಿಸುವ ಆಕಾಂಕ್ಷಿಗಳು ಸಹ ಹೆಚ್ಚಾಗಿದ್ದಾರೆ. ಕುಡಿಯುವ ನೀರಿನ ಅಭಾವ ಹಾಗೂ ಸ್ವಚ್ಛತೆಯ ಕೊರತೆಯ ಸಮಸ್ಯೆಯಿಂದ ಬಳಲುತ್ತಿರುವ ರೋಗಗ್ರಸ್ಥ ನಗರಕ್ಕೆ ಚಿಕಿತ್ಸೆ ನೀಡುವೆವು ಎಂಬ ಭರವಸೆಯೊಂದಿಗೆ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಟಿಕೆಟ್ ಗಾಗಿ ತಮ್ಮ ತಮ್ಮ ಪಕ್ಷಗಳ ಮುಖಂಡರ ಮನವೊಲಿಸುವ ಕಾರ್ಯ ಭರದಿಂದ ಸಾಗಿದೆ.
ಮರೀಚಿಕೆಯಾದ ಮೂಲಭೂತ ಸೌಕರ್ಯ:
ಈ ಹಿಂದೆ ಒಟ್ಟು ೨೭ ವಾರ್ಡ್‌ಗಳನ್ನು ಹೊಂದಿದ್ದ ಶಿಡ್ಲಘಟ್ಟ ಪುರಸಭೆ ೩೧ ವಾರ್ಡ್‌ಗಳಾಗಿ ವಿಭಜನೆಗೊಂಡು ನಗರಸಭೆಯಾಗಿ ಮೇಲ್ದರ್ಜೆಗೇರಿದಾಗ ನಗರ ಇನ್ನಾದರೂ ಅಭಿವೃದ್ದಿಯಾಗಬಹುದು ಎನ್ನುವ ನಿರೀಕ್ಷೆ ಜನತೆಯಲ್ಲಿತ್ತು. ಆದರೆ ನಗರಸಭೆಗೆ ಆಯ್ಕೆಯಾಗಿ ಹೋದ ಸದಸ್ಯರೂ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರ ಅಭಿವೃದ್ದಿಯಾಗುವುದಿರಲಿ ಕನಿಷ್ಠ ನಗರದ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಸಲಿಕ್ಕೆ ಸಹ ಆಗಲಿಲ್ಲ.
ಕಳೆದ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ ಅನುಧಾನದಲ್ಲಿ ನೂತನ ನಗರಸಭೆ ಕಾರ್ಯಾಲಯ ನಿರ್ಮಾಣ ಮಾಡಲೆಂದು ಸ್ಥಳ ಗುರುತಿಸಿ ಅಲ್ಲಿದ್ದ ಹಳೆ ಮಳಿಗೆಯನ್ನು ಕೆಡವಲಾಯಿತು. ಆದರೆ ಈವರೆಗೂ ಕಟ್ಟಡ ನಿರ್ಮಾಣದ ಕಾಮಗಾರಿ ಶುರುಮಾಡಲಿಲ್ಲ. ಅಧಿಕಾರಿಗಳ ಪ್ರಕಾರ ನೂರಾರು ಕೊಳವೆಬಾವಿ ಕೊರೆಸಿದರಾದರೂ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಸಿಗಲಿಲ್ಲ ಎಂಬ ಉತ್ತರ ಕೊಡುತ್ತಿದ್ದಾರೆ.
ನಗರ ಸಮೀಪದ ರೈತರಿಂದ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆಯಲು ಅವಕಾಶವಿದ್ದರೂ ನಗರಸಭೆ ಅಧಿಕಾರಿಗಳು ಈ ಕೆಲಸ ಮಾಡಿಲ್ಲ. ಹಾಗಾಗಿ ಜನತೆಗೆ ಸಮರ್ಪಕ ನೀರು ಪೂರೈಸಲು ನಗರಸಭೆ ವಿಫಲವಾಗಿದೆ. ನೀರು ಬಿಟ್ಟರೂ ಅದು ಕಲುಷಿತವಾಗಿದೆ. ಗುತ್ತಿಗೆ ನೌಕರರ ಮುಷ್ಕರ ಹಾಗೂ ಅಧ್ಯಕ್ಷ ಆಡಳಿತದಿಂದಾಗಿ ನೀರಿನ ಸರಬರಾಜು ಹಾಗೂ ಕಸ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ನಗರದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿಯೂ ಕಸದರಾಶಿಗಳು ಸಾಕಷ್ಟಿವೆ ಎಂದು ನಾಗರಿಕರು ದೂರುತ್ತಿದ್ದಾರೆ. ಇನ್ನು ನಗರದಲ್ಲಿರುವ ಎರಡು ಮುಖ್ಯ ರಸ್ತೆಗಳಿಗೆ ಅಲ್ಪ ಸ್ವಲ್ಪ ಡಾಂಬರು ಕಾಮಗಾರಿ ನಡೆದಿದೆಯಾದರೂ ಗುಣಮಟ್ಟದ ಕಾಮಗಾರಿ ನಡೆದಿಲ್ಲ ಎಂಬ ಆರೋಪವಿದೆ.
ಅಧ್ಯಕ್ಷ ಸ್ಥಾನ ಗೊಂದಲ, ರಾಜಕೀಯ ದೊಂಬರಾಟದಲ್ಲಿ ಮುಗಿದ ಕಾರ್ಯಾವದಿ
ಕಳೆದ ೨೦೧೩ ರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೧೪ ಸದಸ್ಯರು, ಜೆಡಿಎಸ್ ಬೆಂಬಲಿತ ೧೧ ಸದಸ್ಯರು ಸೇರಿದಂತೆ ೧ ಬಿಜೆಪಿ ಹಾಗು ೧ ಪಕ್ಷೇತರ ಸದಸ್ಯರು ಜಯಶೀಲರಾಗಿದ್ದರು. ಮೊದಲ ಅವಧಿಗೆ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಾಗುವಲ್ಲಿ ಯಶಸ್ವಿಯಾದರೆ, ಎರಡನೇ ಅವಧಿಗೆ ಅಡ್ಡಮತದಾನದಿಂದ ಜೆಡಿಎಸ್ ಸದಸ್ಯ ಅಧ್ಯಕ್ಷರಾಗಿ ಆಯ್ಕೆಯಾದರು. ಇದು ಇಷ್ಟಕ್ಕೆ ನಿಲ್ಲದೇ ತಾವೇ ಬೆಂಬಲಿಸಿ ಅಧ್ಯಕ್ಷರನ್ನಾಗಿ ಮಾಡಿದವರನ್ನು ಅದೇ ಸದಸ್ಯರು ಮತ್ತೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರಾದರೂ ನಂತರ ಕೋರ್ಟ್ ಆದೇಶದ ಮೇಲೆ ಅದೇ ವ್ಯಕ್ತಿ ಅಧ್ಯಕ್ಷರಾಗಿ ಮುಂದುವರೆದರು. ಕಳೆದ ಐದು ವರ್ಷಗಳ ನಗರಸಭೆ ಆಡಳಿತಾವಧಿಯಲ್ಲಿ ನಗರದ ಜನತೆಯ ಪರವಾಗಿ ಯೋಚಿಸುವುದಕ್ಕಿಂತ ತಮ್ಮ ಸ್ವಪ್ರತಿಷ್ಠೆ, ಹಠ, ಅಧಿಕಾರ ಉಳಿಸಿಕೊಳ್ಳುವಲ್ಲಿ ಜನಪ್ರತಿನಿಧಿಗಳು ನಿರತರಾಗಿದ್ದನ್ನು ನಗರದ ಜನತೆ ನೋಡಿ ಬೇಸತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಜಿದ್ದಿಗಾಗಿ ಸ್ವಪಕ್ಷ ವಿರೋಧಿ ನೀತಿ, ಗೊಂದಲದಲ್ಲಿ ಮತದಾರರು
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆಯಾದರೂ ನಗರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿಯಾಗಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ನಿದರ್ಶನವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತಯಾಚನೆ ಮಾಡಿದ್ದರು. ಆದರೆ ಕೆ.ಎಚ್.ಮುನಿಯಪ್ಪ ಅವರ ವಿರುದ್ಧವಾಗಿ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರು ಬಿಜೆಪಿ ಪರ ಮತಯಾಚಿಸಿದ್ದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ನಗರಸಭೆ ಚುನಾವಣೆಯಲ್ಲಿ ಮೈತ್ರಿ ಎನ್ನುವುದು ದೂರದ ಮಾತಾಗಿ ಕಾಣುತ್ತಿದೆ.

error: Content is protected !!