Home News ನಗರಸಭೆ ಚುನಾವಣೆಗೆ ಸರ್ವ ಸಿದ್ಧತೆ

ನಗರಸಭೆ ಚುನಾವಣೆಗೆ ಸರ್ವ ಸಿದ್ಧತೆ

0

ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಮಂಗಳವಾರ ಚುನಾವಣಾ ಮತಟ್ಟೆಗಳಿಗೆ ಚುನಾವಣಾ ಯಂತ್ರ ಹಾಗೂ ಸಲಕರಣೆಗಳನ್ನು ಅಧಿಕಾರಿಗಳಿಗೆ ವಿತರಣೆ ಮಾಡಿ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿದರು.
ಮೇ ೨೯ ರ ಬುದವಾರ ನಡೆಯುವ ಸ್ಥಳೀಯ ನಗರಸಭೆ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿರುವುದಾಗಿ ಅವರು ತಿಳಿಸಿದರು.

ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಮಂಗಳವಾರ ಚುನಾವಣಾ ಮತಟ್ಟೆಗಳಿಗೆ ತೆರಳಲು ಕಾದು ಕುಳಿತಿರುವ ಸಿಬ್ಬಂದಿ
ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯ ೪೨ ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆ ಸಿಬ್ಬಂದಿಯಾಗಿ ೧೬೦ ಮಂದಿ ಸಿಬ್ಬಂದಿ ಸೇರಿದಂತೆ ೧೪೦ ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಬ್ಬಂದಿಗೆ ಅಗತ್ಯವಾಗಿರುವ ಮೂಲಸೌಕರ್ಯ ಸೇರಿದಂತೆ ಚುನಾವಣಾ ಸಿಬ್ಬಂದಿ ಹಾಗೂ ಸಾಮಗ್ರಿಯನ್ನು ಮತಗಟ್ಟೆಗೆ ಸಾಗಿಸಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಮಾತನಾಡಿ, ನಗರಸಭೆ ಚುನಾವಣೆಯನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸಲು ಬೇಕಾದ ಅಗತ್ಯ ರಕ್ಷಣಾ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ. ನಗರದ ೪೨ ಬೂತ್‌ಗಳು ಹಾಗೂ ತಾಲ್ಲೂಕಿನ ಗಂಭೀರನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಒಂದು ಬೂತ್ ಸೇರಿ ಒಟ್ಟು ೪೩ ಬೂತ್‌ಗಳಲ್ಲಿ ಬುಧವಾರ ಚುನಾವಣೆ ನಡೆಯಲಿದೆ. ಈ ಪೈಕಿ ೧೦ ಅತೀ ಸೂಕ್ಷ್ಮ ಮತಗಟ್ಟೆಗಳಾಗಿದ್ದು ೧೬ ಸೂಕ್ಷ್ಮ ಹಾಗೂ ೧೬ ಸಾಮಾನ್ಯ ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆಗಳಿಗೂ ಅಗತ್ಯವಿರುವ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್ ಮಾತನಾಡಿ, ನಗರಸಭೆ ವ್ಯಾಪ್ತಿಯ ೩೧ ವಾರ್ಡುಗಳಿಗೆ ಬುಧವಾರ ಚುನಾವಣೆ ನಡೆಯಲಿದ್ದು ಬೆಳಗ್ಗೆ ೦೭ ಗಂಟೆಯಿಂದ ಸಂಜೆ ೦೫ ಗಂಟೆಯವರಗೂ ಮತದಾನ ಪ್ರಕ್ರಿಯೆ ನಡೆಯಲಿದೆ. ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಸಲು ಬೇಕಾದ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

error: Content is protected !!