ಶಿಡ್ಲಘಟ್ಟದ ಕೊಳಗೇರಿಯ ಬಡಜನರಿಗಾಗಿ ಸರ್ಕಾರದವರು ಕೆ.ಎಂ.ಎಫ್ ಮೂಲಕ ಮೂರು ಸಾವಿರ ಲೀಟರ್ ಹಾಲನ್ನು ನೀಡುತ್ತಿದ್ದಾರೆ. ಅದನ್ನು ನಗರಸಭೆಯ ಸದಸ್ಯರು ಹಾಗೂ ಸ್ವಯಂ ಸೇವಕರ ಮುಖಾಂತರ ತಲುಪಿಸುತ್ತಿದ್ದೇವೆ ಎಂದು ನಗರಸಭೆ ಪೌರಾಯುಕ್ತ ತ್ಯಾಗರಾಜ್ ತಿಳಿಸಿದರು.
ನಗರಸಭೆ ಮುಂಭಾಗದಲ್ಲಿ ಶುಕ್ರವಾರ ಮುಂಜಾನೆ ಸರ್ಕಾರದ ನೆರವಿನಿಂದ ಕೆ.ಎಂ.ಎಫ್ ನೀಡಿದ ಮೂರು ಸಾವಿರ ಲೀಟರ್ ಹಾಲನ್ನು ಪಡೆದು ಅವರು ಮಾತನಾಡಿದರು.
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಿರುವುದರಿಂದ ಕೊಳಗೇರಿಯಲ್ಲಿ ವಾಸಿಸುವ ಬಡವರಿಗೆ ಹಾಗೂ ದಿನಗೂಲಿ ಮಾಡುವವರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಇದರಿಂದಾಗಿ ಸರ್ಕಾರ ಅವರಿಗೆ ನೆರವು ನೀಡಲು ಮುಂದಾಗಿದೆ. ನಾವು ನಗರದಲ್ಲಿ ರಾಜೀವ್ ಗಾಂಧಿ ಆಶ್ರಯ ಬಡಾವಣೆ, ಕಾರ್ಮಿಕ ನಗರ, ಕಾಲೋನಿಗಳಲ್ಲಿ ಮೂರು ಸಾವಿರ ಬಡ ಕುಟುಂಬಗಳನ್ನು ಗುರುತಿಸಿದ್ದು, ಅವರಿಗೆ ಕುಟುಂಬಕ್ಕೆ ಒಂದು ಲೀಟರ್ ಹಾಲಿನ ಪ್ಯಾಕೆಟ್ ವಿತರಿಸುತ್ತಿದ್ದೇವೆ. ಇದು ಲಾಕ್ ಡೌನ್ ಎಷ್ಟು ದಿನಗಳಿರುತ್ತದೆಯೋ ಅಷ್ಟೂ ದಿನಗಳು ಹಾಲು ಸರಬರಾಜಾಗುತ್ತದೆ ಎಂದು ಹೇಳಿದರು.
ಕೆಎಂಎಫ್ ನ ಅಧಿಕಾರಿಗಳಾದ ಚಂದ್ರಶೇಖರ್, ಉಮೇಶ್, ನಗರಸಭೆಯ ಆರೋಗ್ಯ ನಿರೀಕ್ಷಕಿ ಶೋಭಾ, ದಿಲೀಪ್, ಮುರಳಿ, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ರಮೇಶ್ ಹಾಜರಿದ್ದರು.