ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ 25 ಕೋಟಿ ರೂಗಳಲ್ಲಿ ಶೇ.85 ರಷ್ಟು ಹಣ ಬಿಡುಗಡೆಯಾಗಿದ್ದು ನಗರದ ಸರ್ವತೋಮುಖ ಬೆಳವಣಿಗೆಗೆ ಬಳಕೆಯಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಹೆಲ್ತ್ ಕಾಲೋನಿ ರಸ್ತೆಯ ನಗರಸಭೆಯ ಖಾಲಿ ನಿವೇಶನದಲ್ಲಿ ಸೋಮವಾರ ನಗರಸಭೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
21 ಕೋಟಿ 25 ಲಕ್ಷ ರೂಗಳು ಬಿಡುಗಡೆಯಾಗಿದೆ, ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬವಣೆಯನ್ನು ನೀಗಿಸುವುದು, ನಗರವನ್ನು ಪ್ರವೇಶಿಸುವಾಗ ಮುಂಚೆ ಇದ್ದ ಕೆಟ್ಟ ಪರಿಸರವನ್ನು ಸರಿಪಡಿಸುವುದು ಹಾಗೂ ಎಲ್ಲಾ ರಸ್ತೆಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಗರೋತ್ಥಾನ ಮೂರನೇ ಹಂತದ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ನಗರಸಭಾ ಸದಸ್ಯ ಅಫ್ಸರ್‌ಪಾಷ ಮಾತನಾಡಿ, ಕುಡಿಯುವ ನೀರಿಗಾಗಿ 6 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಆಶ್ರಯ ಬಡಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರಿನ ಟ್ಯಾಂಕ್, ಸಂಪ್ ನಿರ್ಮಿಸಲಾಗುವುದು ಹಾಗೂ ಕೊಳವೆಬಾವಿಗಳನ್ನು ಕೊರೆಸಲಾಗುವುದು. ನಗರದ ವ್ಯಾಪ್ತಿಯಲ್ಲಿ ನೀರಿಲ್ಲದ ಭಾಗದಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆಯ ನಿರ್ಮಾಣಕ್ಕೆ 11 ಕೋಟಿ ರೂಗಳನ್ನು ಮೀಸಲಿಡಲಾಗಿದೆ. 3.3 ಕಿ.ಮೀ ಕಾಂಕ್ರೀಟ್ ರಸ್ತೆ ಮತ್ತು 13.3 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗುವುದು. ಪ್ರಮುಖ ರಸ್ತೆಗಳಾದ ಬಸ್ ನಿಲ್ದಾಣದಿಂದ ದಿಬ್ಬೂರಹಳ್ಳಿ ರಸ್ತೆ, ಸಲ್ಲಾಪುರಮ್ಮ ದೇವಾಲಯದ ಬಳಿಯಿಂದ ಬೈಪಾಸ್ ರಸ್ತೆ, ರೈಲ್ವೆ ನಿಲ್ದಾಣದ ಬಳಿಯಿಂದ ಇದ್ಲೂಡು ರಸ್ತೆ, ಈದ್‌ಗಾ ಮುಂಭಾಗದಿಂದ ಮಯೂರ ವೃತ್ತದವರೆಗೆ, ಓಟಿ ವೃತ್ತದಿಂದ ಉಲ್ಲೂರುಪೇಟೆವರೆಗೆ, ಶಾಮಣ್ಣ ಬಾವಿಯ ರಸ್ತೆ ಮುಂತಾದ ಹಲವು ಮುಖ್ಯ ರಸ್ತೆಗಳ ಡಾಂಬರೀಕರಣ ಕಾರ್ಯ ನಡೆಸಲಾಗುತ್ತದೆ. 4 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ನಗರಸಭೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಿಸಿದರು.
ನಗರಸಭೆ ಸದಸ್ಯರಾದ ಕಿಶನ್, ರಾಘವೇಂದ್ರ, ವೆಂಕಟಸ್ವಾಮಿ, ಮುಖಂಡರಾದ ಲಕ್ಷ್ಮೀನಾರಾಯಣ, ರಮೇಶ್, ರಾಮಕೃಷ್ಣಪ್ಪ, ಶಫಿ, ಸಿಕಂದರ್, ಸಲೀಂ, ಕನಕಪ್ರಸಾದ್, ಶ್ರೀನಾಥ್, ರವಿ, ಮಂಜುನಾಥ, ಅಶ್ವತ್ಥನಾರಾಯಣ, ಅಕ್ರಂಪಾಷ ಹಾಜರಿದ್ದರು.
ಮತಪ್ರಚಾರಕ್ಕೆ ವೇದಿಕೆ ಬಳಿ ಜೆಡಿಎಸ್ ವಾಹನ: ಸರ್ಕಾರಿ ಕಾರ್ಯಕ್ರಮ ಆಗಿದ್ದರೂ ವೇದಿಕೆಯ ಹತ್ತಿರದಲ್ಲೇ ಜೆಡಿಎಸ್ ಸಾಧನೆಗಳನ್ನು ಸಾರುವ ಪಕ್ಷದ ಎಲ್‌ಇಡಿ ವಾಹನವನ್ನು ನಿಲ್ಲಿಸಲಾಗಿತ್ತು. ನಗರಸಭೆಯ ಅಧ್ಯಕ್ಷೆ ಹಾಗೂ ಆಯುಕ್ತರ ಗೈರು ಎದ್ದು ಕಾಣುತ್ತಿತ್ತು.
- Advertisement -
- Advertisement -
- Advertisement -