Home News ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ಶಾಲಾ ಆವರಣದಲ್ಲಿ ಭರ್ಜರಿ ವ್ಯಾಪಾರ

ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ಶಾಲಾ ಆವರಣದಲ್ಲಿ ಭರ್ಜರಿ ವ್ಯಾಪಾರ

0

ಅಮ್ಮನ ಕಾಯಿ ಹೋಳಿಗೆ ತಿಂದು ರುಚಿ ನೋಡಿ ಎಂದು ಒಂದೆಡೆ ಕರೆಯುತ್ತಿದ್ದರೆ, ಆಸ್ಮಾನ್ ಚಾಟ್ ಸೆಂಟರ್ ಇದು ಬಗೆಬಗೆಯ ಚಾಟ್ಸ್ ದೊರೆಯುತ್ತದೆ ಬನ್ನಿ ಬನ್ನಿ ಎಂದು ಮತ್ತೊಂದೆಡೆ ತಿನಿಸುಗಳ ಅಂಗಡಿಯ ಬುಲಾವ್ ಕೇಳಿಬರುತ್ತಿತ್ತು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ವ್ಯಾಪಾರ ದಿನದ ಅಂಗವಾಗಿ ವೈವಿಧ್ಯಮಯ ಅಂಗಡಿಗಳನ್ನು ಶಾಲಾ ಆವರಣದಲ್ಲಿ ತೆರೆದು ಭರ್ಜರಿ ವ್ಯಾಪಾರ ನಡೆಸಿದರು.
ಬಾಯಲ್ಲಿ ನೀರೂರಿಸುವ ಉಪ್ಪು ಖಾರ ಹಚ್ಚಿರುವ ಸೌತೇಕಾಯಿ, ಬಗೆಬಗೆಯ ಶರಬತ್ತುಗಳು, ಪಾನೀಪುರಿ, ಕಾಫಿ ಚಹಾ, ಮನೆಯಲ್ಲಿ ತಯಾರಿಸಿರುವ ಹೋಳಿಗೆ, ಲಡ್ಡು, ವಿವಿಧ ದಿನಬಳಕೆ ವಸ್ತುಗಳು, ತರಕಾರಿ, ಮೊಟ್ಟೆ, ಬೋಟಿ, ಬಿಸ್ಕತ್‌, ಚಾಕೋಲೇಟ್‌ಗಳು, ಶಾಂಪೂ ಪೊಟ್ಟಣಗಳು, ಪೆನ್ನು, ಪೆನ್ಸಿಲ್‌ಗಳು, ರಸ್ಕು, ಬ್ರೆಡ್‌, ಬನ್ನು, ಗುಲ್ಕನ್ನು, ಎಳೆನೀರು, ಸೀಬೆಹಣ್ಣು, ಪಪ್ಪಾಯ, ಬಿಸಿಬಿಸಿ ಬೋಂಡ, ಬಜ್ಜಿ, ಇಡ್ಲಿ, ವಡೆ ಮುಂತಾದವುಗಳನ್ನು ಮಾರಾಟಕ್ಕಿಡಲಾಗಿತ್ತು.
ತಳ್ಳಿಕೊಂಡು ಹೋಗುವ ಪಾನೀಪುರಿ ಗಾಡಿಗಳನ್ನೇ ಶಾಲಾ ಆವರಣಕ್ಕೆ ತಂದಿಟ್ಟಿದ್ದರು. ವಿದ್ಯಾರ್ಥಿಗಳು ಗ್ರಾಹಕರ ಅನುಕೂಲಕ್ಕಾಗಿ ನೆರಳಿಗಾಗಿ ಟಾರ್ಪಾಲನ್ನು ಕಟ್ಟಿದ್ದರು. ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಕೂರುವ ಬೆಂಚುಗಳು ಶಾಲಾ ಆವರಣದಲ್ಲಿ ಗ್ರಾಹಕರು ಅಂಗಡಿಗಳ ಮುಂದೆ ಕುಳಿತುಕೊಳ್ಳುವ ಬೆಂಚುಗಳಾಗಿ ಮಾರ್ಪಾಡಾಗಿದ್ದವು.
ವಿದ್ಯಾರ್ಥಿಗಳೇ ಮೂರು ನಾಲ್ಕು ಮಂದಿ ಗುಂಪುಗಳಾಗಿ ವಿಂಗಡಿಸಿಕೊಂಡು ಒಂದೊಂದು ರೀತಿಯ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದರು. ಕೆಲವರು ತಮ್ಮಲ್ಲಿ ಮಾರಾಟಕ್ಕಿರುವ ವಸ್ತುಗಳ ಬಗ್ಗೆ ಜೋರಾಗಿ ಕೂಗಿ ಹೇಳುತ್ತಾ ಗ್ರಾಹಕರನ್ನು ಆಕರ್ಷಿಸುತ್ತಿದ್ದರೆ, ಕೆಲವರು ಹಣವನ್ನು ಎಣಿಸಿಕೊಂಡು ಲೆಕ್ಕ ಬರೆದಿಡುವ ಕೆಲಸವಾಗಿತ್ತು.
‘ವಿದ್ಯಾರ್ಥಿಗಳಲ್ಲಿ ವ್ಯವಹಾರಜ್ಞಾನ ಬೆಳೆಸಲು ವ್ಯಾಪಾರ ದಿನವನ್ನು ಆಚರಿಸುತ್ತಿದ್ದೇವೆ. ಅವರೇ ಬಂಡವಾಳ ಹೂಡಿ ವ್ಯಾಪಾರ ನಡೆಸಿ ಲಾಭ ನಷ್ಟದ ಬಗ್ಗೆ ವರದಿ ಸಲ್ಲಿಸುತ್ತಾರೆ. ಗ್ರಾಹಕರ ಮನಸ್ಸನ್ನು ಅರಿತು ಅವರಿಗೆ ಬೇಕಾದ ವಸ್ತುಗಳನ್ನು ನೀಡುವುದಲ್ಲದೆ ಅವರಿಗೆ ಅಗತ್ಯವೆನಿಸುವಂತೆ ವಸ್ತುಗಳನ್ನು ಬಿಂಬಿಸಿ ಮಾರುವ ಕಲೆಯನ್ನೂ ಬೆಳೆಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ’ ಎಂದು ಶಾಲಾ ಕಾಲೇಜು ಸಂಸ್ಥಾಪಕರಾದ ಕೃಷ್ಣಮೂರ್ತಿ ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಸುದರ್ಶನ್‌, ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ, ಸುಮಾ ಮತ್ತಿತರರು ಇ ಸಂದರ್ಭದಲ್ಲಿ ಹಾಜರಿದ್ದರು.