ಫ್ಲೋರೈಡ್ ಅಂಶವಿದೆಯೆಂಬ ಕಾರಣಕ್ಕೆ ನಮ್ಮ ಭಾಗದ ಪ್ರಸಿದ್ಧ ಮಾವು ವಿದೇಶಕ್ಕೆ ರಫ್ತಾಗದಂತೆ ತಿರಸ್ಕಾರಗೊಂಡಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಜನಜಾಗೃತಿ ಮತ್ತು ಜಲಜಾಗೃತಿ ಪಾದಯಾತ್ರೆಯ ಮೂಲಕ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಸುಮಾರು 200 ಕಿ.ಮೀ ಕ್ರಮಿಸಿ ಚೀಮಂಗಲಕ್ಕೆ ಆಗಮಿಸಿದ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
ಎಲ್ಲೆಲ್ಲೂ ಈಗ ವಿಷಯುಕ್ತ ಫ್ಲೋರೈಡ್ ಅಂಶ ಕಾಣಿಸಿಕೊಳ್ಳುತ್ತಿದೆ. ಬಯಲುಸೀಮೆಯ ಜನ ಈ ದುರಂತಮ ಸ್ಥಿತಿಯಲ್ಲಿದ್ದರೆ, ಅತ್ತ ಬೆಂಗಳೂರಿನ ಜನಕ್ಕೆ 2050 ರ ಹೊತ್ತಿಗೆ ಎಷ್ಟು ನೀರು ಬೇಕಾಗಬಹುದು, ಅದಕ್ಕಾಗಿ ಏನೇನು ಕ್ರಮ ಕೈಗೊಳ್ಳಬೇಕೆಂದು ವರದಿ ರೂಪಿಸಲು ಸರ್ಕಾರ ತ್ಯಾಗರಾಜನ್ ಸಮಿತಿಯನ್ನು ನೇಮಿಸಿದೆ. ಅಲ್ಲಿನ ಜನಕ್ಕೆ ಕುಡಿಯಲು ಬೇಕಾಗುವ 88 ಟಿ.ಎಂ.ಸಿ ನೀರನ್ನೊದಗಿಸಲು ಕ್ರಮ ಕೈಗೊಳ್ಳಲು ಮುಂದಾಗುವ ಸರ್ಕಾರ ನಮ್ಮ ಈಗಿನ ದುಸ್ಥಿತಿ ಕೊಂಚವೂ ತಲೆಕೆಡಿಸಿಕೊಳ್ಳುತ್ತಿಲ್ಲ. ನಗರಗಳಿಗೆ ಹಣ್ಣು, ಹಾಲು, ತರಕಾರಿ ಬೆಳೆದು ಒದಗಿಸಬಲ್ಲ ಫಲವತ್ತಾದ ಭೂಮಿ, ಶಕ್ತ ಜನರು ನೀರಿಲ್ಲದೆ ಗುಳೆ ಹೋಗುವ ಹಾಗೂ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೇವೆ. ನಮ್ಮ ಹೋರಾಟವನ್ನು ದಿಕ್ಕುತಪ್ಪಿಸಲೆಂದು ಗುತ್ತಿಗೆದಾರರ ಅನುಕೂಲಕ್ಕಾಗಿ ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ನಮಗೆ ಸರ್ಕಾರ ಮೋಸ ಮಾಡಿದೆ. ನಮ್ಮ ಕೆರೆಗಳಿಗೆ ನೀರು ಹರಿಯದೇ ಅಂತರ್ಜಲ ವೃದ್ಧಿಸದಿದ್ದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಮುಖಂಡ ಮಳ್ಳೂರು ಹರೀಶ್ ಮಾತನಾಡಿ, ಇದುವರೆಗೂ ನಮ್ಮನ್ನಾಳಿದ ಯಾವುದೇ ಸರ್ಕಾರ ಬಯಲು ಸೀಮೆ ಪ್ರದೇಶದ ಬಗ್ಗೆ ಕಾಳಜಿ ವಹಿಸದೆ ನೀರಾವರಿ ಯೊಜನೆಗಳನ್ನು ಮಾಡದ ಕಾರಣ ನಾವೆಲ್ಲಾ ಜಾಗೃತರಾಗುವ ಅಗತ್ಯ ಉಂಟಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ದೊಡ್ಡ ಮಟ್ಟದ ಹೋರಾಟ ಮಾಡಿ ಸರ್ಕಾರವನ್ನು ಜಾಗೃತಗೊಳಿಸಬೇಕಿದೆ. ನಾವೆಲ್ಲರೂ ಮತ ಹಾಕುತ್ತೇವೆ ಮತ್ತು ತೆರಿಗೆ ಕಟ್ಟುತ್ತೇವೆ. ಆದರೆ ಸರ್ಕಾರಗಳು ಮಾತ್ರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರುವ ನೀತಿ ಅನುಸರಿಸುತ್ತಿವೆ. ಉತ್ತರ ಕರ್ನಾಟಕದ ಜನರಿಗಾಗಿ 750 ಟಿ.ಎಂ.ಸಿ ನೀರಿನ ಯೋಜನೆ, ಮೈಸೂರಿನ ಭಾಗದ ಜನರಿಗಾಗಿ 250 ಟಿ.ಎಂ.ಸಿ.ನೀರಿನ ಯೋಜನೆ ರೂಪಿಸಿದ್ದಾರೆ. ಆದರೆ ನಾವು ಬಯಲುಸೀಮೆಯ ಜನ ಯಾವ ಪಾಪವನ್ನು ಮಾಡಿದ್ದೇವೆಂದು ನಮಗಾಗಿ ಯಾವ ಯೋಜನೆಗಳೂ ರೂಪುಗೊಳ್ಳುತ್ತಿಲ್ಲ. ಚುನಾವಣೆಗೆ ಮುಂಚೆ ನೀಡಿದ ಆಶ್ವಾಸನೆಗಳೆಲ್ಲ ಏನಾದವು ಎಂದು ಪ್ರಶ್ನಿಸಿದರು.
ಹಲವು ವರ್ಷಗಳ ಹಿಂದೆ ಕೆರೆಗಳಿಂದ ನೀರನ್ನು ಬಳಸುತ್ತಿದ್ದೆವು. ಆದರೆ ಈಗ ಕೆರೆಗಳೆಲ್ಲ ಒಣಗಿವೆ. ಬಾವಿಗಳನ್ನು ತೋಡಿಸಲು ಹಣ ಖರ್ಚು ಮಾಡಿದೆವು. ಬಾವಿಗಳಲ್ಲಿ ಗರಂಡ ಕಟ್ಟಿದೆವು. ಅದು ಕೂಡ ವ್ಯರ್ಥವಾಯಿತು. ಭೂಮಿಯನ್ನು ಬಗೆದು 250 ರಿಂದ 300 ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ತೋಡಿದ್ದು, ವಿದ್ಯುತ್ ಅಭಾವದಿಂದ ಕಟ್ಟಿದ ಕಲ್ಲಿನ ತೊಟ್ಟಿಗಳು ಎಲ್ಲ ವ್ಯರ್ಥವಾಗಿ 1000 ದಿಂದ ಸಾವಿರದೈನೂರು ಅಡಿ ಆಳದವರೆಗೂ ಕೊಳವೆ ಬಾವಿಗಳನ್ನು ಕೊರೆದು ಹನಿನೀರಾವರಿಯ ಪೈಪುಗಳನ್ನು ಅಳವಡಿಸಿದ್ದರೂ ನೀರಿಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ದುಸ್ಥಿತಿ ರೈತರದ್ದಾಗಿದೆ. ನೀರಿಗಾಗಿ ಬಯಲು ಸೀಮೆಯ ಜನರು ಮಾಡಿರುವ ಖರ್ಚಿನಲ್ಲಿ ಎರಡು ನೀರಾವರಿ ಯೋಜನೆಗಳನ್ನು ರೂಪಿಸಬಹುದಾಗಿತ್ತು ಎಂದು ನುಡಿದರು.
ಪ್ರತಿದಿನ 25 ರಿಂದ 30 ಕಿ.ಮೀ ಪಾದಯಾತ್ರೆ ನಡೆಸುತ್ತಾ ಬಯಲು ಸೀಮೆಯ 153 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಸುಮಾರು 55 ರಿಂದ 60 ದಿನಗಳ ಕಾಲ ಜಲ ಜಾಗೃತಿ ಮತ್ತು ಜನ ಜಾಗೃತಿಯನ್ನು ಶಾಶ್ವತ ನೀರಾವರಿ ಹೋರಾಟಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ನೀರಿಗಾಗಿ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ನಮಗೆ ನೀರು ಬರುತ್ತದೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸರ್ಕಾರದ ವರದಿಯ ಪ್ರಕಾರ ಎತ್ತಿನಹೊಳೆ ಯೋಜನೆಯಿಂದ ನಮ್ಮ ಭಾಗಕ್ಕೆ ಬರುವುದು ಕೇವಲ ಎರಡೂವರೆ ಟಿ.ಎಂ.ಸಿ ನೀರು ಮಾತ್ರ. ಜಿಲ್ಲೆಯ 2,15,360 ಹೆಕ್ಟೇರ್ ಕೃಷಿ ಭೂಮಿ, ಸಾವಿರಾರು ದನಕರುಗಳು, ಲಕ್ಷಾಂತರ ಜನ, 3,800 ಕೆರೆ ಕುಂಟೆಗಳಿಗೆ ಎಷ್ಟು ನೀರು ಬೇಕೆಂಬ ಮಾಹಿತಿ ಸರ್ಕಾರದ ಬಳಿಯಿಲ್ಲ. ನಾವೀಗ ರಾಜಕಾರಣಿಗಳನ್ನು ನೆಚ್ಚಿ ಕೂರುವಂತಿಲ್ಲ. ಮರಳು ಮಾಫಿಯಾ ತಡೆಯುವಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಢಳಿತ ವಿಫಲವಾಗಿದೆ. ಪ್ರತಿ ಕುಟುಂಬದವರೂ ಆಲ, ಬೇವು, ಹಾಗೂ ಹಣ್ಣಿನ ಮರಗಳನ್ನು ಮಕ್ಕಳಂತೆ ಬೆಳೆಸಿ ಪ್ರಕೃತಿ ಮಳೆಯ ರೂಪದಲ್ಲಿ ವರವನ್ನು ನೀಡುತ್ತದೆ. ಗುಂಡು ತೋಪುಗಳನ್ನು ಉಳಿಸಿಕೊಳ್ಳಿ ಎಂದು ಹೇಳಿದರು.
ರಾಜಣ್ಣ, ರಂಗನರಸಿಂಹಯ್ಯ, ನಿವೃತ್ತ ತಹಶಿಲ್ದಾರ್ ವೆಂಕಟೇಶ್, ಈಶ್ವರ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮುನಿರಾಜು, ನಾಗಪ್ಪ, ಕೃಷ್ಣಪ್ಪ, ವೆಂಕಟ್, ರಾಮಕೃಷ್ಣಪ್ಪ, ಮಂಜುನಾಥ್, ವೇಣು, ಛಲಪತಿ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.