ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ೧೦೦ ಮಾನವ ದಿನಗಳ ಕೆಲಸ ಸಿಗುತ್ತಿದ್ದು ಅಲ್ಪ ಸ್ವಲ್ಪ ಜಾಗವಿದ್ದರೆ ದನದ ಕೊಠಡಿ ಮತ್ತು ಕೋಳಿ ಕೊಠಡಿ ನಿರ್ಮಿಸಿಕೊಳ್ಳಲು ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರೂ ಸಮಾಜದ ಮುಖ್ಯ ವಾಹಿನಿ ಬರಬೇಕು ಎಂದು ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ತಿಳಿಸಿದರು.
ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮ ದೇವಾಲಯದ ಸಮುದಾಯ ಭವನದಲ್ಲಿ ಜೀವಿಕ ಸಂಘಟನೆಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಅನುಷ್ಠಾನಕ್ಕಾಗಿ ಅಧಿಕಾರಿಗಳಿಗೆ ಆಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈಗಾಗಲೇ ತಾಲ್ಲೂಕಿನಾದ್ಯಂತ ಸ್ವಸಹಾಯ ಗುಂಪುಗಳಿಗೆ ಸುಮಾರು ೮೫ ಲಕ್ಷ ರೂ ಹಣ ಬಿಡುಗಡೆಯಾಗಿದ್ದು ಇದರಿಂದ ಸಾಲ ಪಡೆದ ಫಲಾನುಭವಿಗಳು ಹಣವನ್ನು ಉತ್ಪಾದನೆಗಾಗಿ ಬಳಸಬೇಕು. ಈಗಾಗಲೇ ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧ ಮಾಡಿರುವುದರಿಂದ ಬಟ್ಟೆ ಬ್ಯಾಗುಗಳ ತಯಾರಿಕೆ ಹಾಗೂ ಟೈಲರಿಂಗ್ ತರಬೇತಿ ನೀಡುವ ಕೆಲಸ ಮಾಡುವುದರಿಂದ ಆರ್ಥಿಕವಾಗಿ ಮುಂದುವರೆಯಬಹುದು ಎಂದರು.
ಬೇರೆಯವರ ಬಳಿ ದುಡಿಯುವ ಬದಲಿಗೆ ಸ್ವಯಂ ಉದ್ಯೋಗ ಮಾಡಬೇಕು. ತಾಲ್ಲೂಕಿನಾಧ್ಯಂತ ನಿವೇಶನ ರಹಿತರಿಗೆ ನಿವೇಶನ ಹಾಗೂ ಮನೆಯಿಲ್ಲದವರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹರಿಗೆ ಸಿಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಜೀವಿಕ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಇಂದಿಗೂ ಜೀತ ಪದ್ದತಿ ಜೀವಂತ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ. ಜೀತದಾಳುಗಳ ಬಿಡುಗಡೆ ಹಾಗೂ ಅವರು ಸಮಾಜದಲ್ಲಿ ಗೌರವವಯುತ ಜೀವನ ನಡೆಸಲು ಸರ್ಕಾರ ಅವರಿಗೆ ಕನಿಷ್ಠ ವೇತನ ನಿಗಧಿ ಮಾಡಬೇಕು. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಜೀತಪದ್ದತಿ ಹೋಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅನಸೂಯದೇವಿ, ದಸಂಸ ತಾಲ್ಲೂಕು ಸಂಚಾಲಕ ಎನ್.ವೆಂಕಟೇಶ್, ಜೀವಿಕ ತಾಲ್ಲೂಕು ಸಂಚಾಲಕ ನರಸಿಂಹಪ್ಪ, ಹೋಬಳಿ ಸಂಚಾಲಕ ಬಾಲರಾಜು, ಪದಾಧಿಕಾರಿಗಳಾದ ಮುನಿರಾಜು, ಅಮರಾವತಿ ಹಾಜರಿದ್ದರು.