ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಗ್ರಾಮದ ಅಗ್ರಹಾರ ಆಂಜನೇಯಸ್ವಾಮಿ ದೇವಾಲಯದ ರಥೋತ್ಸವ ಹಾಗೂ ಉಟ್ಲು ಮಹೋತ್ಸವ ಈಚೆಗೆ ವಿಜೃಂಭಣೆಯಿಂದ ನೆರವೇರಿತು.
ತಾಲ್ಲೂಕಿನ ಉತ್ತರ ದಿಕ್ಕಿನಲ್ಲಿ ಪಾಪಾಗ್ನಿ ನದಿ ತಟ್ಟದಲ್ಲಿ ನೆಲೆಸಿರುವ ಈ ಅಗ್ರಹಾರ ಆಂಜನೇಯಸ್ವಾಮಿ ದೇವಾಲಯದ ರಥೋತ್ಸವವು ೪೦ ವರ್ಷಗಳ ನಂತರ ನಡೆಯುತ್ತಿದ್ದು ನೆರೆಯ ಹಲವು ಗ್ರಾಮಗಳ ನೂರಾರು ಭಕ್ತರು ಸ್ವಾಮಿಯ ಪೂಜಾ ಕಾರ್ಯಕ್ಕೆ ಸಾಕ್ಷಿಯಾದರು.
ಈ ಹಿಂದೆ ರಥೋತ್ಸವ ನಡೆಯುತ್ತಿತ್ತಾದರೂ ಮರದ ತೇರು ಗೆದ್ದಲು ಹಿಡಿದು ಶಿಥಿಲಗೊಂಡಿದ್ದ ಕಾರಣ ೪೦ ವರ್ಷಗಳಿಂದಲೂ ರಥೋತ್ಸವ ನಡೆದಿರಲಿಲ್ಲ. ಇದೀಗ ಭಕ್ತರು ಹಾಗೂ ದಾನಿಗಳ ನೆರವಿನಿಂದ ನೂತನ ತೇರನ್ನು ನಿರ್ಮಿಸಿದ್ದು ಅದರಲ್ಲೆ ರಥೋತ್ಸವ ನಡೆಯಿತು.
ಹೂಗಳಿಂದ ಅಲಂಕೃತವಾದ ತೇರಿನಲ್ಲಿ ಶ್ರೀಕೋದಂಡರಾಮ, ಸೀತೆ, ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನೆರೆದ ಭಕ್ತರೆಲ್ಲರೂ ತೇರಿನ ಹಗ್ಗವನ್ನು ಹಿಡಿದೆಳೆದು ಸ್ವಾಮಿಗೆ ಉಘೆ ಉಘೇ ಎಂದು ದೇವರ ನಾಮ ಸ್ಮರಣೆಯೊಂದಿಗೆ ತೇರನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿಸಿದರು.
ತೇರಿನ ನಂತರ ದೇವಾಲಯದ ಆವರಣದಲ್ಲಿ ಮನ ರಂಜನಾ ಉಟ್ಲು ಮಹೋತ್ಸವ ನಡೆಯಿತು, ದೇವಸ್ಥಾನದ ಸಂಚಾಲಕ ರಾಮಲಿಂಗಾರೆಡ್ಡಿ,
ತಿಮ್ಮನಾಯಕನಹಳ್ಳಿ ರಮೇಶ್, ರಾಮಚಂದ್ರರಾವ್, ದಡಂಘಟ್ಟ ಮಂಜುನಾಥ್, ದಿಬ್ಬೂರಹಳ್ಳಿ ರಾಜಣ್ಣ, ಪಲಿಚೇರ್ಲು ಪ್ರಕಾಶ್, ವೇದ ಬಹ್ಮಶ್ರೀ ಕೇಶವ ಭಟಾಚಾರ್ಯ ಭಾಗವಹಿಸಿದ್ದರು.