Home News ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ನೂರಾರು ಬೈಕುಗಳಲ್ಲಿ ಹೊರಟ ಕಾರ್ಯಕರ್ತರು

ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ನೂರಾರು ಬೈಕುಗಳಲ್ಲಿ ಹೊರಟ ಕಾರ್ಯಕರ್ತರು

0

ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಶಿಡ್ಲಘಟ್ಟದಿಂದ ನೂರಾರು ಬೈಕ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಹೊರಟರು.
ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಮುಂಭಾಗದಿಂದ ಹೊರಟ ನೂರಾರು ಬೈಕ್ ಸವಾರರು, ತಮ್ಮ ವಾಹನಗಳಿಗೆ ಬಿಜೆಪಿ ಬಾವುಟಗಳನ್ನು ಕಟ್ಟಿಕೊಂಡು ನಗರದ ಮಯೂರ ವೃತ್ತದ ಮೂಲಕ ಕೋಟೆ ಸರ್ಕಲ್, ಬಸ್ ನಿಲ್ದಾಣದ ಮುಖಾಂತರ ನೆಲಮಂಗಲಕ್ಕೆ ತೆರಳಿದರು.
ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಆಮಿತ್ ಷಾ ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಬೈಕ್ ರ್ಯಾಲಿಯಲ್ಲಿ ಮಾತನಾಡಿದ ತಾಲ್ಲೂಕು ಮಂಡಲದ ಅಧ್ಯಕ್ಷ ಬಿ.ಸಿ.ನಂದೀಶ್, ನವೆಂಬರ್ 2ರಿಂದ ನವಕರ್ನಾಟಕ ಪರಿವರ್ತನಾ ಯಾತ್ರೆ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬೃಹತ್ ಶಕ್ತಿ ಪ್ರದರ್ಶನಕ್ಕೆ ಈ ಯಾತ್ರೆ ಏರ್ಪಡಿಸಿರುವ ಬಿಜೆಪಿ ನಾಯಕರು ಮೂರು ಲಕ್ಷ ಜನರನ್ನು ಸೇರಿಸಲು ಸಿದ್ಧತೆ ನಡೆಸಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ರಣಕಹಳೆ ಮೊಳಗಿಸಲಿರುವ ಅಮಿತ್ ಷಾ, ಚುನಾವಣಾ ಪ್ರಚಾರ ಇಲ್ಲಿಂದಲೇ ಆರಂಭಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಡಿ.ಆರ್. ಶಿವಕುಮಾರ ಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ ಸಾಧನೆಗಳು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ-ಭ್ರಷ್ಟಾಚಾರ ಆರೋಪಗಳ ಪಟ್ಟಿ ಸಿದ್ಧಗೊಂಡಿದೆ. ಜತೆಗೆ ‘ಕಮಲವು ಅರಳಲಿ, ಕೇಸರಿ ಮರಳಲಿ, ಕರ್ನಾಟಕದಲ್ಲಿ ಕಮಲ ರಂಗೇರಲಿ, ಒಂದೇ ಮಾತರಂ, ಜೈ ಬಿಜೆಪಿ’ ಥೀಮ್ಸಾಂಗ್ ಸೀಡಿ ಸಹ ಸಿದ್ಧಗೊಳಿಸಲಾಗಿದ್ದು, ಬಿಜೆಪಿ ಸಾಧನೆ, ಕಾಂಗ್ರೆಸ್ನ ವೈಫಲ್ಯಗಳ ಕರಪತ್ರಗಳನ್ನು ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರದ ಬೂತ್ ಮಟ್ಟಕ್ಕೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ ಎಂದರು.
ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಮಳ್ಳೂರು ಮಂಜುನಾಥ್, ದಾಮೋದರ್, ಖ.ರಾ.ಖಂಡೇರಾವ್, ನರೇಶ್, ಶಿವಮ್ಮ, ಸುಶೀಲಮ್ಮ, ಮಹೇಶ್ ಕುಮಾರ್, ಸಿ.ಕೆ.ಪ್ರತಾಪ್ ಈ ಸಂದರ್ಭದಲ್ಲಿ ಹಾಜರಿದ್ದರು.