Home News ನಾಗರ ಪಂಚಮಿಯಂದು ಲಕ್ಷಾಂತರ ಲೀಟರ್ ಹಾಲು ವ್ಯಯವಾಗುತ್ತಿದೆ

ನಾಗರ ಪಂಚಮಿಯಂದು ಲಕ್ಷಾಂತರ ಲೀಟರ್ ಹಾಲು ವ್ಯಯವಾಗುತ್ತಿದೆ

0

ಹಾವು ಹಾಲನ್ನು ಕುಡಿಯುವುದಿಲ್ಲ. ನಾಗರ ಪಂಚಮಿಯಂದು ಲಕ್ಷಾಂತರ ಲೀಟರ್ ಹಾಲು ಹಾವಿಗೆ ಎರೆಯುವ ನೆಪದಲ್ಲಿ ವೃಥಾ ವ್ಯಯವಾಗುತ್ತಿದೆ. ಅದರ ಬದಲು ಅಗತ್ಯವಿರುವವರಿಗೆ ನೀಡಿ ಎಂದು ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ಕುಂದಲಗುರ್ಕಿ ಮುನೀಂದ್ರ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಮಾನವ ಬಂಧುತ್ವ ವೇದಿಕೆ ಹಾಗೂ ಇತರ ಪ್ರಗತಿಪರ ಸಂಘಟನೆಗಳ ಸದಸ್ಯರೊಂದಿಗೆ ರೋಗಿಗಳಿಗೆ ಹಾಲಿನ ಪ್ಯಾಕೆಟ್‌ ವಿತರಿಸಿ ಅವರು ಮಾತನಾಡಿದರು.
ನಾಗರ ಪಂಚಮಿ ನಿಮಿತ್ತ ಮಕ್ಕಳಿಗೆ, ರೋಗಿಗಳಿಗೆ, ವೃದ್ಧರಿಗೆ ಹಾಲು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬಹುದಾಗಿದೆ. ಹಾಲಿನಂತಹ ಮನಸ್ಸಿನಿಂದ ಪ್ರಯತ್ನಿಸಿದರೆ ವಿಷತುಂಬಿಕೊಂಡಿರುವ ವೈರಿಯ ಮನಸ್ಸನ್ನು ಗೆಲ್ಲಬಹುದು, ಆತನನ್ನು ಸರಿದಾರಿಗೆ ತರಬಹುದು ಎಂಬುದನ್ನು ನಾಗರಪಂಚಮಿ ಹಬ್ಬ ಸಂಕೇತಿಸುತ್ತದೆ. ಈ ತತ್ವವನ್ನು ಅಳವಡಿಸಿಕೊಳ್ಳಬಹುದು. ಕಲ್ಲು ನಾಗರಕ್ಕೆ ಹಾಲೆರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ.
ಅಮೃತ ಸಮಾನವಾದ ಹಾಲನ್ನು ನಾವು ವ್ಯರ್ಥವಾಗಿ ವ್ಯಯಿಸಬಾರದು. ಪವಿತ್ರ ಗೋಮಾತೆಯಿಂದ ಬಂದ ಹಾಲು ಇನ್ನೊಂದು ಜೀವಕ್ಕೆ ಸೇರಬೇಕು ವಿನಾ ಕಲ್ಲುಗಳಿಗಲ್ಲ. ನಾಗರ ಪಂಚಮಿ ಹಬ್ಬದ ನಿಮಿತ್ಯ ನಿಜ ಹಾವುಗಳನ್ನು ಆದಷ್ಟು ರಕ್ಷಿಸಿ, ಪರಿಸರ ಸಮತೋಲನ ಕಾಪಾಡಬೇಕು. ವೈಜ್ಞಾನಿಕ ಹಿನ್ನೆಲೆಯ ಸಂಪ್ರದಾಯಗಳನ್ನು ಅರಿತು ಹಬ್ಬ ಆಚರಿಸೋಣ. ಮಳೆಗಾಲದ ಪ್ರಾರಂಭದ ಈ ಋತುಮಾನ ಹಾವುಗಳ ಸಂತಾನೋತ್ಪತ್ತಿಯ ಕಾಲ, ಮೊಟ್ಟೆಯೊಡೆದು ಮರಿ ಹಾವುಗಳು ಹೊರ ಬಂದು ತಮ್ಮ ಜೀವನ ಪ್ರಾರಂಭಿಸುತ್ತವೆ. ಹಾವುಗಳ ರೈತನ ಮಿತ್ರ. ಇಲಿಗಳನ್ನು ತಿಂದು ಬೆಳೆಗಳ ರಕ್ಷಣೆಯಲ್ಲಿ ಸಹಾಯಕವಾಗುವ ಪ್ರಾಣಿ ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಬೊಮ್ಮೆಕಲ್ಲು ವೆಂಕಟೇಶ್‌, ಪ್ರಗತಿಪರ ಸಂಘಟನೆಗಳ ನಾಗನರಸಿಂಹ, ಎಸ್‌.ಎಂ.ಮಂಜುನಾಥ್‌, ದೇವರಮಳ್ಳೂರು ಕೃಷ್ಣಪ್ಪ, ಕೇಶವ, ನವೀನ, ಮಂಜುನಾಥ, ಅಕ್ರಂ ಹಾಜರಿದ್ದರು.

error: Content is protected !!