Home News ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆ

0

ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆದಿನವಾಗಿದ್ದು ಕಾಂಗ್ರೆಸ್, ಜೆ.ಡಿ.ಸ್ ಮತ್ತು ಬಿ.ಜೆ.ಪಿ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.
ತಾಲ್ಲೂಕಿನ ೧೭ ತಾಲ್ಲೂಕು ಪಂಚಾಯತಿ ಹಾಗೂ ೫ ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಚುನಾವಣೆ ನಡೆಯಲ್ಲಿದ್ದು ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿವೆ. ತಮ್ಮ ಅಭ್ಯರ್ಥಿಗಳೊಂದಿಗೆ ಪಕ್ಷದ ಬಾವುಟಗಳನ್ನು ಹಿಡಿದು ಜೈಕಾರಗಳನ್ನು ಹಾಕುತ್ತಾ ಅಪಾರ ಸಂಖ್ಯೆಯಲ್ಲಿ ಎಲ್ಲಾ ಪಕ್ಷಗಳ ಕಾರ್ಯಕರ್ತರು ಜಮಾಯಿಸಿದ್ದರು. ತಾಲ್ಲೂಕು ಕಚೇರಿ ಮುಂಬಾಗ ಗಲಭೆಗೆ ಅವಕಾಶ ನೀಡದಂತೆ ಬಿಗಿ ಪೋಲಿಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.
ಜೆ.ಡಿ.ಸ್ ಅಭ್ಯರ್ಥಿಗಳು ಶಾಸಕ ಎಂ.ರಾಜಣ್ಣ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಅನುಪಸ್ಥಿತಿಯಲ್ಲಿ ಅಭ್ಯರ್ಥಿಗಳು ತಮ್ಮ ಸ್ಥಳೀಯ ಮುಂಖಡರೊಂದಿಗೆ ನಾಮಪತ್ರ ಸಲ್ಲಿಸಿದರು.
ಬಂಡಾಯ: ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ, ಹಿರಿಯ ಕಾಂಗ್ರೆಸ್ ಮುಖಂಡರ ಮಧ್ಯಸ್ತಿಕೆಯಲ್ಲಿ ಒಂದಾದರೂ ಜಿಲ್ಲಾ ಪಂಚಾಯತಿಯ ಮೂರು ಕ್ಷೇತ್ರಗಳಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ದಿಬ್ಬೂರಹಳ್ಳಿ ಕ್ಷೇತ್ರದಲ್ಲಿ ಓಬಳಪ್ಪ, ಗಂಜಿಗುಂಟೆ ಕ್ಷೇತ್ರದಲ್ಲಿ ದೊಗರನಾಯಕನಹಳ್ಳಿ ವೆಂಕಟೇಶ್, ಅಬ್ಲೂಡು ಕ್ಷೇತ್ರದಲ್ಲಿ ತಾತಹಳ್ಳಿ ನರಸಿಂಹಯ್ಯ ಮತ್ತು ಶಿವಮೂರ್ತಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಸಿ.ಪಿ.ಎಂ ನ ಏಕೈಕ ಅಭ್ಯರ್ಥಿ: ಸಿ.ಪಿ.ಐ.ಎಂ ಪಕ್ಷದಿಂದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಸದಾನಂದ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಜಿ.ಪಂ. ಕಾಂಗ್ರೆಸ್ ಅಭ್ಯರ್ಥಿಗಳು: ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ವಿನುತಾ ಶ್ರೀನಿವಾಸ್ ಚೀಮಂಗಲ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್ ದಿಬ್ಬೂರಹಳ್ಳಿ ಕ್ಷೇತ್ರ, ಗೋಪಾಲರೆಡ್ಡಿ ಗಂಜಿಗುಂಟೆ ಕ್ಷೇತ್ರ, ವೆಂಕಟೇಶಪ್ಪ ಅಬ್ಲೂಡು ಕ್ಷೇತ್ರ ಮತ್ತು ನಿರ್ಮಲಾ ಮುನಿರಾಜು ಜಂಗಮಕೋಟೆ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಜಿ.ಪಂ. ಜೆಡಿಎಸ್ ಅಭ್ಯರ್ಥಿಗಳು: ತನುಜಾ ರಘು ಚೀಮಂಗಲ ಕ್ಷೇತ್ರ, ಚಿಕ್ಕನರಸಿಂಹಪ್ಪ ದಿಬ್ಬೂರಹಳ್ಳಿ ಕ್ಷೇತ್ರ, ಡಾ.ಜಯರಾಮರೆಡ್ಡಿ ಗಂಜಿಗುಂಟೆ ಕ್ಷೇತ್ರ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಅಬ್ಲೂಡು ಕ್ಷೇತ್ರ ಮತ್ತು ನಳಿನಾ ಮಂಜುನಾಥ್ ಜಂಗಮಕೋಟೆ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಆಮ್ ಆದ್ಮಿ ಬೆಂಬಲಿತ ಅಭ್ಯರ್ಥಿ: ಪಲಿಚೇರ್ಲು ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಕನ್ನಂಪಲ್ಲಿ ನಾಗರತ್ನಮ್ಮ ಎಂಬುವವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಆಮ್ ಆದ್ಮಿ ಪಕ್ಷವು ಇವರನ್ನು ಬೆಂಬಲಿಸುತ್ತಿದೆ.

error: Content is protected !!