Home News ‘ನಾವೆಲ್ಲಾ ಒಂದೇ’ ಎಂಬ ಸಂದೇಶ ಬಿಂಬಿಸುತ್ತಿರುವ ವಿವಿಧ ಪಕ್ಷಗಳ ಮುಖಂಡರು

‘ನಾವೆಲ್ಲಾ ಒಂದೇ’ ಎಂಬ ಸಂದೇಶ ಬಿಂಬಿಸುತ್ತಿರುವ ವಿವಿಧ ಪಕ್ಷಗಳ ಮುಖಂಡರು

0

ಶಿಡ್ಲಘಟ್ಟ ಕ್ಷೇತ್ರದಲ್ಲಿ ಚುನಾವಣೆಯ ಬಿಸಿಯಲ್ಲಿ ನಡೆಯುತ್ತಿವೆ ರಾಜಿ ಸಂಧಾನ ಸಭೆಗಳು
ಒಂದೆಡೆ ವಾತಾವರಣದಲ್ಲಿ ಚಳಿ ಮೂಡಿದ್ದರೆ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಗರಿಗೆದರಿದೆ. ಮಜ್ಜಿಗೆ ಕಡೆದಾಗ ಬೆಣ್ಣೆ ಒಂದೆಡೆ ಸೇರುವಂತೆ, ಚುನಾವಣೆ ಸಮೀಪಿಸುತ್ತಿದ್ದಂತೆ ಶತ್ರುವೂ ಮಿತ್ರನಾಗುತ್ತಾನೆ ಎಂಬುದು ನಿಜವಾಗತೊಡಗಿದೆ.
೨೦೧೮ ರ ವಿಧಾನಸಭೆ ಚುನಾವಣೆಗೆ ಕ್ಷೇತ್ರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಸಿದ್ಧತೆಗಳು ಆರಂಭಗೊಂಡಿವೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಏರಿಕೆಯಾಗಿತ್ತು. ಅದರ ಹಿನ್ನೆಲೆಯಲ್ಲಿ ಪಕ್ಷದ ಗೆಲುವು ಹಾಗೂ ಪ್ರತಿಷ್ಠೆ ಮುಖ್ಯ ಎಂದು ಬಣಗಳು ಹಾಗೂ ಆಕಾಂಕ್ಷಿಗಳ ನಡುವೆ ರಾಜಿ ಸಂಧಾನಗಳು ತೆರೆಮರೆಯಲ್ಲಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್ ಪಕ್ಷದಲ್ಲಿ ಉಂಟಾಗಿರುವ ಬಣ ರಾಜಕೀಯದಿಂದಾಗಿ ಚುನಾವಣೆಯಲ್ಲಿ ಟಿಕೆಟ್ ಗಾಗಿ ಮುಸುಕಿನ ಗುದ್ದಾಟ ಬಹಿರಂಗವಾಗಿತ್ತು. ಹಾಲಿ ಶಾಸಕ ಎಂ.ರಾಜಣ್ಣ ಮತ್ತು ಎಚ್.ಡಿ.ದೇವೇಗೌಡ, ಜಯಪ್ರಕಾಶನಾರಾಯಣ ಸೇವಾ ಟ್ರಸ್ಟ್ ನ ಮೂಲಕ ಸಮಾಜ ಸೇವೆ ಆರಂಭಿಸಿರುವ ಮೇಲೂರು ರವಿಕುಮಾರ್ ಜೆಡಿಎಸ್ ಪಕ್ಷದ ಬಿ ಫಾರಂ ಪಡೆಯಲು ಸರ್ವಪ್ರಯತ್ನಗಳನ್ನೂ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ನಡುವೆ ಗೊಂದಲ ಹಾಗೂ ಪಕ್ಷದ ಗೆಲುವಿಗೆ ತೊಂದರೆಯಾಗಬಹುದೆಂದು ಗ್ರಹಿಸಿ ಒಮ್ಮೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಮನೆಯಲ್ಲಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಧ್ಯಸ್ಥಿಕೆಯಲ್ಲಿ ಈಗಾಗಲೇ ಎರಡು ರಾಜಿ ಸಂಧಾನ ಸಭೆಗಳು ನಡೆದಿವೆ. ಯಾರಿಗೇ ಪಕ್ಷದ ನಾಯಕರು ಬಿಫಾರಂ ನೀಡಿದರೂ ಇಬ್ಬರೂ ಒಗ್ಗೂಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂಬ ಉದ್ದೇಶದಿಂದ ನಡೆಯುತ್ತಿರುವ ಸಂಧಾನ ಸಭೆಗಳೂ ಗೌಪ್ಯವಾಗಿ ಉಳಿದಿಲ್ಲ.
ಕಾಂಗ್ರೆಸ್ ನಿಂದ ಸ್ಪರ್ಧಿಸಿ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ವಿ.ಮುನಿಯಪ್ಪ ಅವರು, ಏಕೈಕ ಅಭ್ಯರ್ಥಿಯಾಗಿರುತ್ತಿದ್ದರು, ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲೂ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ. ತಾಲ್ಲೂಕಿನಲ್ಲಿ ಈಗಾಗಲೇ ಎಸ್.ಎನ್.ಕ್ರಿಯಾ ಟ್ರಸ್ಟ್ ನ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಂಜಿನಪ್ಪ (ಪುಟ್ಟು) ಕೂಡಾ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದ ಹಳ್ಳಿ ಹಳ್ಳಿಗೂ ಮನೆಮನೆಗೂ ಹೋಗಿ ತಮ್ಮನ್ನು ಬೆಂಬಲಿಸುವಂತೆ ಕೋರುತ್ತಿದ್ದಾರೆ.
ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ವಿವಿಧ ರಾಜ್ಯ ಮುಖಂಡರು ಕಾರ್ಯಕರ್ತರ ಸಭೆಯಲ್ಲಿ ವಿ.ಮುನಿಯಪ್ಪ ಅವರನ್ನು ಬೆಂಬಲಿಸುವಂತೆ ಕರೆ ನೀಡಿರುವುದು ಹಾಗೂ ಅವರ ನೇತೃತ್ವದಲ್ಲಿ ಕ್ಷೇತ್ರದ ಚುನಾವಣೆ ಎದುರಿಸುವುದು ಎಂಬ ಸಂದೇಶ ರವಾನಿಸಿದ್ದಾರೆ. ಇದರೊಂದಿಗೆ ಶೀಥಲ ಸಮರದಲ್ಲಿದ್ದ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ವಿ.ಮುನಿಯಪ್ಪ ತಾವುಗಳು ಒಂದಾಗಿದ್ದೇವೆ, ಪಕ್ಷದ ಗೆಲುವು ಮಾತ್ರ ಮುಖ್ಯ ಎಂದು ಘೋಷಿಸಿದ್ದಾರೆ.
ಬಿಜೆಪಿ ಪಕ್ಷದಲ್ಲೂ ಆಕಾಂಕ್ಷಿಗಳ ಸಂಖ್ಯೆ ಆಂತರಿಕ ಗೊಂದಲಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಕಡಿಮೆಯಾಗುತ್ತಿವೆ. ಕಳೆದ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಡಿ.ಆರ್.ಶಿವಕುಮಾರಗೌಡ ಅವರ ನೇತೃತ್ವದಲ್ಲಿ ಭಿನ್ನ ಮನಸ್ಸುಗಳೆಲ್ಲ ಒಂದಾಗಿ ಮನೆಮನೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಶೆಟ್ಟಹಳ್ಳಿ ಗ್ರಾಮದಲ್ಲಿ ಈಚೆಗೆ ಬಹುಜನ ಸಮಾಜ ಪಕ್ಷದ ಕಾರ್ಯಕ್ರಮ ನಡೆದಿದ್ದು, ನಾವೂ ಇದ್ದೇವೆ ನಮ್ಮನ್ನೂ ಕಡೆಗಣಿಸುವಂತಿಲ್ಲ ಎಂದು ಬಿಎಸ್ಪಿ ಸಾರಿದೆ.
ಕಾಂಗ್ರೆಸ್, ಬಿಜೆಪಿ ಮನೆಮನೆ ಭೇಟಿ ಪ್ರಾರಂಭಿಸಿವೆ. ಜೆಡಿಎಸ್ನ ಸಂಧಾನ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಅವರೂ ಮನೆಮನೆ ಭೇಟಿ ಪ್ರಾರಂಭಿಸಲಿರುವ ಸೂಚನೆಯಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಬಂದು ಹೋಗಿದ್ದು, ಮುಖ್ಯಮಂತ್ರಿಗಳನ್ನು ಕರೆಸಿ ಶಕ್ತಿ ಪ್ರದರ್ಶನ ನಡೆಸುವ ಉದ್ದೇಶದಲ್ಲಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕ್ರಮಕ್ಕೆ ದೇವೇಗೌಡರು ಬಂದು ಹೋಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜನವರಿ 12 ಕ್ಕೆ ಆಗಮಿಸಲಿದ್ದಾರೆ.
ಅಂತೂ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ಎಷ್ಟು ಸಫಲವಾಗುತ್ತದೆಯೋ ಕಾಲವೇ ಉತ್ತರಿಸಲಿದೆ.