Home News ನಿಂತುಹೋದ ಅಂಗನವಾಡಿ ಕಟ್ಟಡದ ಕೆಲಸ, ಗ್ರಾಮಸ್ಥರ ಆಕ್ರೋಶ

ನಿಂತುಹೋದ ಅಂಗನವಾಡಿ ಕಟ್ಟಡದ ಕೆಲಸ, ಗ್ರಾಮಸ್ಥರ ಆಕ್ರೋಶ

0

ಅಂಗನವಾಡಿ ಕಟ್ಟಡ ಕಟ್ಟಲು ಟೆಂಡರ್‌ ಪ್ರಕ್ರಿಯೆ ಮುಗಿದು ಹಣ ನಿಗದಿಪಡಿಸಿದ್ದರೂ ಗುತ್ತಿಗೆದಾರರ ವಿಳಂಬದಿಂದಾಗಿ ಒಂದು ವರ್ಷವಾದರೂ ಕಾಮಗಾರಿ ನಡೆಯದೆ ಮಕ್ಕಳು ಸಮುದಾಯಭವನವನ್ನು ಆಶ್ರಯಿಸಬೇಕಾಗಿದೆ ಎಂದು ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷವೇ ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯ ಪೂರೈಸಿ 9 ಲಕ್ಷ 15 ಸಾವಿರ ರೂಗಳಷ್ಟು ಹಣ ಮೀಸಲಿಡಲಾಗಿತ್ತು. ಪಾಯವನ್ನು ತೋಡುವ ಸಮಯದಲ್ಲಿ ಗ್ರಾಮಸ್ಥರು ಈ ಸ್ಥಳದಲ್ಲಿ ಹಿಂದೆ ಕುಂಟೆ ಇತ್ತು. ಹಾಗಾಗಿ ಕಟ್ಟಡದ ಭದ್ರತೆಯ ದೃಷ್ಟಿಯಿಂದ ಐದರಿಂದ ಆರು ಅಡಿಗಳ ಪಾಯ ಹಾಕಿ ಮತ್ತು ಪಿಲ್ಲರುಗಳ ಮೇಲೆ ಕಟ್ಟಡ ನಿರ್ಮಿಸಿ ಎಂದು ಒತ್ತಾಯಿಸಿದ್ದೆವು. ಕೇವಲ ಮೂರು ಅಡಿಗಳಷ್ಟು ಪಾಯ ತೋಡಿ ಗುತ್ತಿಗೆದಾರ ಇತ್ತ ಸುಳಿಯದೇ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು. ಎಂಜಿನಿಯರ್‌ ಅವರನ್ನು ಕೇಳಿದರೆ ಗುತ್ತಿಗೆದಾರನಿಗೆ ನೋಟಿಸ್‌ ನೀಡಿದ್ದೇವೆ ಎನ್ನುತ್ತಾರೆ. ದೇವರು ವರ ಕೊಟ್ಟರೂ ಪೂಜಾರಿ ವರಕೊಡದಂತಾಗಿದೆ ನಮ್ಮ ಗ್ರಾಮದ ಸ್ಥಿತಿ ಎಂದು ದೂರಿದರು.
‘ನಮ್ಮ ಮಕ್ಕಳು ಅಂಗನವಾಡಿ ಕಟ್ಟಡವಿಲ್ಲದೆ ಸಮುದಾಯ ಭವನದಲ್ಲಿರುತ್ತಾರೆ. ಯಾವುದಾದರೂ ಕಾರ್ಯಕ್ರಮವಿದ್ದಲ್ಲಿ ಮಕ್ಕಳು ವರಾಂಡದಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿದೆ. ಒಪ್ಪಿಕೊಂಡ ಕೆಲಸವನ್ನು ಮಾಡದಿದ್ದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನಮ್ಮ ಗ್ರಾಮದಲ್ಲಿ ಆದಷ್ಟು ಬೇಗ ಅಂಗನವಾಡಿ ಕಟ್ಟಡದ ಕಾಮಗಾರಿ ಪ್ರಾರಂಭಗೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.