ಶರಣರು ಅಂದು ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಿದ್ದರು. ಅದರಿಂದಾಗಿಯೇ ಸಮಾನತೆ ಸಾಧಿಸಲು ಸಾಧ್ಯವಾಯಿತು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಲಾದ ನಿಜಗುಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿದ್ದ ನಿಜಶರಣ ಅಂಬಿಗರ ಚೌಡಯ್ಯನವರು ಶ್ರೇಷ್ಠ ವಚನಕಾರರು. ಅವರ ವಚನದಲ್ಲಿ ಅಗಾಧವಾದ ಸಾರವಿದೆ. ಅದನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಅಗತ್ಯವಿದೆ. ಇಂಥಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ನಿಜಗುಣ ಅಂಬಿಗರ ಚೌಡಯ್ಯ ಅವರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಸ್ತ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಯಿತು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಬೆಸ್ತರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಜಯರಾಮ್, ತಾಲ್ಲೂಕು ಕಾರ್ಯದರ್ಶಿ ವೆಂಕಟಾದ್ರಿ, ನ್ಯಾತಪ್ಪ, ಎಸ್.ಎನ್.ಕೃಷ್ಣಮೂರ್ತಿ, ಎನ್.ವೆಂಕಟೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.