Home News ನಿಫಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ – ನಗರಸಭೆಯ ಉದ್ಯಾನವನಕ್ಕೆ ಬೀಗ

ನಿಫಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ – ನಗರಸಭೆಯ ಉದ್ಯಾನವನಕ್ಕೆ ಬೀಗ

0

ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ಪುರಸಭೆ ಪಂಪ್‌ಹೌಸ್ ಬಳಿ ಇರುವ ನಗರಸಭೆಯ ಉದ್ಯಾನವನವನ್ನು ಮುಚ್ಚಿಸಿ ನಗರಸಭೆ ಆಯುಕ್ತ ಛಲಪತಿ ಮಾತನಾಡಿದರು.
ಮದ್ದಿಲ್ಲದ ರೋಗವೆಂದೇ ಕುಖ್ಯಾತಿ ಪಡೆದಿರುವ ಅಪರೂಪದ ನಿಫಾ ವೈರಾಣು ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ತಾಲ್ಲೂಕು ವೈದ್ಯಾಧಿಕಾರಿಗಳ ಸೂಚನೆಯ ಮೇರೆಗೆ ನಗರದ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚುತ್ತಿರುವುದಾಗಿ ಅವರು ತಿಳಿಸಿದರು.
ನೂರಾರು ಬಾವಲಿಗಳು, ಗೊರವಂಕ, ಗಿಳಿ, ಕೋಗಿಲೆ, ಅಳಿಲುಗಳು, ಗುಟುರಗಳು ಮುಂತಾದ ಹಲವು ಹಕ್ಕಿಗಳು, ಮಂಗಗಳು ಇಲ್ಲಿರುವ ಬೃಹದಾಕಾರದ ಆಲದ ಮರಗಳು, ತಂಪನ್ನು ನೀಡುವ ಹೊಂಗೆ ಮರಗಳನ್ನು ಆಶ್ರಯಿಸಿವೆ.
ನಿಫಾ ವೈರಾಣು ಸೋಂಕಿಗೆ ಕೇರಳದಲ್ಲಿ ಕೆಲವು ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ಶಂಕಿಸಲಾಗಿದೆ. ಬಾವಲಿ, ಹಂದಿ ಹಾಗೂ ಇತರೆ ಪ್ರಾಣಿಗಳಿಂದ ಹರಡುವ ಈ ಸೋಂಕಿಗೆ ಇದುವರೆಗೂ ಯಾವುದೇ ಸಿದ್ಧ ಔಷಧ ಅಥವಾ ಲಸಿಕೆ ಲಭ್ಯವಿಲ್ಲ. ಸೋಂಕು ಹರಡುವುದನ್ನು ತಡೆಗಟ್ಟುವುದೇ ನಾವೀಗ ಕೈಗೊಳ್ಳಬೇಕಾದ ಕ್ರಮವಾಗಿದೆ. ಈ ನಿಟ್ಟಿನಲ್ಲಿ ನೂರಾರು ಬಾವಲಿಗಳು ವಾಸಿಸುವ ಮರಗಳಿರುವ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಣಿ ಮಾತನಾಡಿ, ‘ಬಾವಲಿ ಮೂಲಕ ಮೊದಲಿಗೆ ಮಲೇಷ್ಯಾದ ಗದ್ದೆಗಳಲ್ಲಿರುವ ಹಂದಿಗಳಲ್ಲಿ ಹಾಗೂ ನಂತರದಲ್ಲಿ ಸಾಕುಪ್ರಾಣಿಗಳಾದ ನಾಯಿ, ಬೆಕ್ಕು, ಆಡು, ಕುದುರೆಗಳಲ್ಲಿಯೂ ಸೋಂಕು ಪತ್ತೆಯಾಯಿತು. ಬಳಿಕ ಮನುಷ್ಯರಿಗೂ ಹರಡಿರುವುದು ವರದಿಯಾಗಿತ್ತು. ಬಾವಲಿಯ ಮೂತ್ರ, ಹಿಕ್ಕೆ ಹಾಗೂ ಜೊಲ್ಲು ಈ ವೈರಾಣು ಸೋಂಕಿನ ಮೂಲವಾಗಿದೆ. ಬಾವಲಿಗಳು ತಿಂದಿರುವ ಹಣ್ಣು ಸೇವನೆ, ಸೋಂಕಿರುವ ಬಾವುಲಿ, ಹಂದಿಗಳ ಜತೆಗಿನ ಸಂಪರ್ಕ, ಸೋಂಕು ಹೊಂದಿರುವ ಇತರೆ ವ್ಯಕ್ತಿಗಳೊಂದಿಗೆ ಸಂಪರ್ಕ, ಒಡನಾಟ ಸೋಂಕು ಹರಡಲು ಕಾರಣ. ಜ್ವರ, ತಲೆನೋವು, ನಿದ್ದೆ ಮಂಪರು, ಭ್ರಮೆ, ಗೊಂದಲಕಾರಿ ಮನಸ್ಥಿತಿ, ಉಸಿರಾಟದ ಸಮಸ್ಯೆ, ಕೋಮಾ, ಮಿದುಳು ಸೋಂಕು ಈ ರೋಗದ ಲಕ್ಷಣಗಳು. ಆದಷ್ಟೂ ಬಾವಲಿಗಳಿರುವ ಪ್ರದೇಶದಿಂದ ದೂರವಿರಿ. ವೈಯಕ್ತಿಕ ಶುಚಿತ್ವಕ್ಕೆ ಮಹತ್ವ ಕೊಡಿ’ ಎಂದು ತಿಳಿಸಿದರು.